ನಿನ್ನ ದಾಸನಾದೆ
(ರಾಗ ಯದುಕುಲಕಾಂಭೋಜ ತ್ರಿಪುಟತಾಳ )
ನಿನ್ನ ದಾಸನಾದೆ ನಾನು ||ಪ||
ಎನ್ನ ಮನ್ನಿಸಿ ಮಮತೆಯ ಮಾಡಯ್ಯ ನೀನು ||ಅ||
ಜನನಿಯ ಗರ್ಭದೊಳು ನಾನು ಬಲು
ದೀನತ್ವದಿಂದ ತೊಳಲಿ ಬಂದವನು
ಚಿನುಮಯಾನಂದಾತ್ಮಕನು ಏ-
ನನುಮಾನವಿಲ್ಲದೆ ನಿನ್ನ ನಂಬಿದೆನು ||
ಹಲವು ಜನ್ಮದಿ ತೊಳಲಿದೆನು ಬಲು
ಬಳಲಿದೆನು ಸಾಕೋ ಜನಿಸಲಾರೆ ನಾನು
ನಳಿನಾಕ್ಷ ನಿನ್ನ ನಂಬಿದೇನು, ಎನ್ನ
ಅಳಲಿಸುವುದು ಗುಣವಲ್ಲ ಇದೇನು ||
ಮಲಮೂತ್ರ ದೇಹದೊಳ್ಬಂದು ಬಲು
ಅಲಸಿದೆ ನಿನ್ನ ಕಾಣದೆ ದೇಹ ನೊಂದು
ಲಲನೆಗಕ್ಷಯವಿತ್ತೆ ಎಂದು, ನಿನ್ನ
ಒಳಗಿನ ಕರುಣದ ಕಂದ ನಾನೆಂದು ||
ಮಂದಮತಿಯೊಳಗಾನು ಬಲು
ದಂದುಗದಲಿ ಸಿಲುಕಿ ನೊಂದೆನೊ ನಾನು
ತಂದೆತಾಯೆಲ್ಲವು ನೀನು, ಹೀಗೆ
ಎಂದು ನೇಮಿಸು ಎನಗೊಂದು ದಾರಿಯನು ||
ಹಿಂದಿನ ಜನ್ಮವ ಮರೆತು ಎನ್ನ
ಅಂತರಂಗವು ಕರಗಿತು ನಿನ್ನನೆ ಮರೆತು
ಚಿಂತೆಗಳೆಲ್ಲವ ತೊರೆದು ನಿ-
ಶ್ಚಿಂತನಾದೆ ನಿನ್ನ ದಾಸರೊಳ್ ಬೆರೆತು ||
ಸಾರಿ ಪೇಳುವೆನೊಂದು ಸೊಲ್ಲ ಇದ-
ನರಿತು ತಿಳಿದುಕೊಳ್ಳಿರಿ ನೀವೆಲ್ಲ
ನಾರಾಯಣನಲ್ಲದಿಲ್ಲ, ಹೀಗೆ
ಸಾರುತಿದೆ ವೇದ ಶಾಸ್ತ್ರಂಗಳಲೆಲ್ಲ ||
ಮರೆತೆನೋ ನಿನ್ನ ನಾಮವನು, ಜಿಹ್ವೆಗೆ
ಬರೆದು ಬೋಧಿಸೊ ನಿನ್ನ ದಿವ್ಯ ನಾಮವನು
ಶರಣುಪೊಕ್ಕರ ಕಾಯುವನು, ನಮ್ಮ
ವರದ ಪುರಂದರವಿಠಲ ಇದೇನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments