ನಿನಗೇನು ಘನವೇನು ವನಜಾಕ್ಷ ವೇಂಕಟೇಶ

ನಿನಗೇನು ಘನವೇನು ವನಜಾಕ್ಷ ವೇಂಕಟೇಶ

(ಸಾರಂಗ ರಾಗ , ಆದಿತಾಳ) ನಿನಗೇನು ಘನವೇನು ವನಜಾಕ್ಷ ವೇಂಕಟೇಶ ಮನಕೆ ಬೇಕಾದುದ ಇತ್ತು ರಕ್ಷಿಸುವರೆ ||ಪ|| ದೇಶ ನಿನ್ನದು ಬಹುಕೋಶ ನಿನ್ನದು ಜಗ- ದೀಶ ನಿನ್ನನು ಭಾಗ್ಯ ಲಕುಮಿ ಸೇವಿಸುವಳು ಆಸೆಯಿಂದಲಿ ನಿನ್ನ ಚರಣವ ಮೊರೆಹೊಕ್ಕೆ ದೋಷವ ಕಳೆದು ಎನ್ನ ಲೇಸಿತ್ತು ಸಲಹಯ್ಯ ||೧|| ಅಣುವಾಗಲೂ ಬಲ್ಲೆ ಮಹತ್ತಾಗಲೂ ಬಲ್ಲೆ ಅಣುಮಹತ್ತಿನೊಳಗೆ ಗುಣವ ತೋರಲೂ ಬಲ್ಲೆ ಕ್ಷಣಕೆ ಮುನಿಯಬಲ್ಲೆ ಆ ಕ್ಷಣಕೆ ರಕ್ಷಿಸಬಲ್ಲೆ ಗುಣಗಳವಂಗುಣವ ನೋಡದೆ ಸಲಹಯ್ಯ್ ||೨|| ಹುಟ್ಟಿದೆ ನರಜನ್ಮದಿ ಬಹಳ ಬಳಲಿಯೆ ಕಷ್ಟ- ಬಟ್ಟೆನು ಕೈಯ ಮುಟ್ಟಿ ರಕ್ಷಿಪರಿಲ್ಲ ಬೆಟ್ಟದೊಡೆಯ ಮನದಭೀಷ್ಟವೆಲ್ಲವನಿತ್ತು ದೃಷ್ಟಿಯಿಂದಲೆ ನೋಡಿ ಒಟ್ಟೈಸಿ ಸಲಹಯ್ಯ ||೩|| ತಂದೆತಾಯಿಗಳಿಲ್ಲ ಬಂಧುಬಾಂಧವರಿಲ್ಲ ಕುಂದು ಹೆಚ್ಚಿಯೆ ನಿರ್ಬಂಧಬಡಿಸುತಿದೆ ಮಂದರಾದ್ರಿಯ ಗೋವಿಂದ ನಿನ್ನಯ ಪಾದ- ದ್ವಂದವ ತೋರಿಸಿ ಚಂದದಿ ಸಲಹಯ್ಯ ||೪|| ಮನದ ಸಂಕಲ್ಪಕೆ ಅನುಗುಣವಾಗಿಯೆ ಘನವಿತ್ತು ಕರೆದೊಯ್ದು ವಿನಯದಿ ಮನ್ನಿಸಿ ಮನೆಗೆ ಕಳುಹು ನಮ್ಮ ವರಾಹತಿಮ್ಮಪ್ಪನೆ ತನುಮನದೊಳಗನು ದಿನದಿನ ಸಲಹಯ್ಯ ||೫|| ---- ಇದು ನೆಕ್ಕರ ಕೃಷ್ಣದಾಸರದು
ದಾಸ ಸಾಹಿತ್ಯ ಪ್ರಕಾರ
ಬರೆದವರು