ನಾನೇನು ಮಾಡಿದೆನೋ
ರಾಗ ಮೋಹನ/ಅಟ್ಟ ತಾಳ
ನಾನೇನು ಮಾಡಿದೆನೋ ವೆಂಕಟರಾಯ
ನೀನೆನ್ನ ಕಾಯಬೇಕೋ || ಪಲ್ಲವಿ ||
ಮಾನಾಪಮಾನವು ನಿನ್ನದು ಎನಗೇನು
ದೀನರಕ್ಷಕ ತಿರುಪತಿಯ ವೆಂಕಟರಾಯ || ಅನು ಪಲ್ಲವಿ ||
ರಕ್ಕಸನಲ್ಲವೇನೋ ಪ್ರಹ್ಲಾದನು
ಚಿಕ್ಕವ ಧ್ರುವನಲ್ಲವೆ
ಉಕ್ಕಿ ಬರುವ ಕರ್ಮ ಮಾಡಿದಜಮಿಳ ನಿಮ್ಮ
ಅಕ್ಕನ ಮಗನೇನೋ ವೆಂಕಟರಾಯ || ೧ ||
ಕರಿರಾಯ ಕರೆಸಿದನೆ ದ್ರೌಪದಾದೇವಿ
ಬರೆದೋಲೆ ಕಳುಹಿದಳೆ
ವರಋಷಿ ಪತ್ನಿ ಕಲ್ಲಾಗಿ ಸ್ತ್ರೀಯಾದದ್ದು
ಧರೆಯೆಲ್ಲ ಅರಿಯದೇನೋ ವೆಂಕಟರಾಯ || ೨ ||
ಒಪ್ಪಿಡಿಯವಲಕ್ಕಿಯ ತಂದವನಿಗೆ
ಒಪ್ಪಿ ಕೊಟ್ಟೆಯೊ ಭಾಗ್ಯವ
ಸರ್ಪಶಯನ ಶ್ರೀ ಪುರಂದರವಿಠಲ
ಅಪ್ರಮೇಯನೆ ಸಲಹೋ ವೆಂಕಟರಾಯ || ೩ ||
~~~ * ~~~
ರಕ್ಕಸನಲ್ಲವೇನೋ - ಪ್ರಹ್ಲಾದನು ವಿಷ್ಣು ಭಕ್ತನಾದರೂ ದೈತ್ಯನಾದ ಹಿರಣ್ಯಕಶಿಪುವಿನ ಮಗ; ದೈತ್ಯ ತಾನೆ?
ಧ್ರುವ - ಉತ್ತಾನಪಾದರಾಯನ ಮಗ ಸಣ್ಣವನಲ್ಲವೆ? ಆ ಹುಡುಗನಿಗಾಗಿ ನೀನು ಬರಬಹುದೋ?
ಅಜಾಮಿಳ - ಕಾನ್ಯಕುಬ್ಜದ ಬ್ರಾಹ್ಮಣನಾದರೂ ದುರಾಚಾರಿಯಲ್ಲವೇ? ಅವನಿಗೆ ನೀನು ಸದ್ಗತಿಯನ್ನಿತ್ತೆಯಲ್ಲ?
ಕರಿರಾಜ - ಗಜೇಂದ್ರ, ಇವನು ಇಂದ್ರದುಮ್ನನು ಪಾಂಡ್ಯದೇಶದ ಅರಸಾಗಿ ವಿಷ್ಣು ಭಕ್ತನಾದರೂ ಅಗಸ್ತ್ಯರಿಂದ ಶಾಪ ಪಡೆದು ಆನೆಯಾದನಲ್ಲವೇ? ಅವನು ನಿನ್ನನ್ನೇನು ಕರೆಕಳುಹಿಸಿದನೆ? ಬರಿದೆ ಕೂಗಿದರೂ ಬಂದೆಯಲ್ಲ?
ದ್ರೌಪದಾದೇವಿ - ದು:ಶಾಸನನು ತನ್ನನ್ನು ಅಪಮಾನಗೊಳಿಸುತ್ತಿದ್ದಾಗ ದ್ರೌಪದಿಯು ನಿನ್ನನ್ನು ನೆನಸಿಕೋಡಳಷ್ಟೆ; ಅದಕ್ಕೇ ನೀನು ಒಲಿದೆಯಲ್ಲ!
ವರಋಷಿಪತ್ನಿ - ಅಹಲ್ಯೆ ; ಗೌತಮನ ಹೆಂಡತಿಯಾದ ಅಹಲ್ಯೆ ಶಾಪದಿಂದ ಕಲ್ಲಗಿರುವಾಗ ರಾಮಾವತಾರದಲ್ಲಿ ಅವಳ ಶಾಪವನ್ನು ನೀಗಿಸಿದೆಯಲ್ಲವೆ?
ಒಪ್ಪಿಡಿಯವಲಕ್ಕಿಯ ತಂದವನಿಗೆ - ಕುಚೇಲನಿಗೆ ಒಂದು ಹಿಡಿ ಅವಲಕ್ಕಿಗೆ ಬದಲಾಗಿ ಸಕಲಸಂಪತ್ತನ್ನೂ ನೀನು ನೀಡಲಿಲ್ಲವೇ?
[ಪುರಂದರ ಸಾಹಿತ್ಯ ದರ್ಶನ - ಭಾಗ ೧]
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments