ನರವರ್ಯ ಭೀಮಸೇನ ನಾರಿಗೆ ಕುಸುಮ ತರುವೆನೆನುತ

ನರವರ್ಯ ಭೀಮಸೇನ ನಾರಿಗೆ ಕುಸುಮ ತರುವೆನೆನುತ

(ರಾಗ ಆರಭಿ. ತ್ರಿಪುಟ ತಾಳ ) ನರವರ್ಯ ಭೀಮಸೇನ ನಾರಿಗೆ ಕುಸುಮ ತರುವೆನೆನುತ ಬೇಗ ತೆರಳಿದನು ಕರಿರಾಜನಂತೆ ದೊಡ್ಡ ಕಾನನ ಮಧ್ಯ ಗಿರಿವರನೇರಿದನ ಗುರು ಪುಂಗವ ||೧|| ಕನಕದ ವೃಕ್ಷವ ಕರದಲಿ ಪಿಡಿದನು ಧನುಸು ಬಾಣಂಗಳ ಧರಿಸಿಕೊಂಡು ಮನೋವೇಗದಿಂದ ಬಂದು ಮಹಾಬಲಸಿಂಧು ಹನುಮನೆಂಬವನ ಕಂಡ ಹರುಷದಿಂದ ||೨|| ಕದಳಿಯ ಬನದಲಿ ಕಂಡನೆ ಹನುಮನ ಎದುರಿಲ್ಲದೆ ಕುಳಿತು ನಿದ್ರೆಗೆಯ್ಯುವನ ಮುದಿದಿಂದ ನುಡಿಸೆ ಬೆದರಿಸಿ ನುಡಿದನು ಎದುರಾಗಿದ್ದ ಕಪಿ ಏಳೆಂದು ಭೀಮ ||೩|| ಭೀಮನ ಮಾತ ಕೇಳಿ ಭೀತಿಯಿಲ್ಲದೆ ಹನುಮ ಸಾಮದಿ ನುಡಿದನು ಸೋಮವಂಶಜನ ಈ ಮೃಗಗಳ ತಂದೆ ಯಾರ ಕಂದನೊ ನೀನು ಪ್ರೇಮದಿಂದಲಿ ಎನಗೆ ಪೇಳೆಂದನಾಗ ||೪|| ಗುರುರಾಯ ವಂಶದಿ ಕುಂತಿಯ ಜಠರದಿ ಮರುತರಾಯರಿಂದ ಜನಿಸಿದ ಭೀಮನು ದುರುಳ ಹಿಡಿಂಬಕ ದುಷ್ಟ ಕಿರ್ಮೀರನ ಕರುಳುಗಳ ಬಗಿದು ಬಂದವ ನಾನು ||೫|| ಹನುಮ ಕಾಣೆಲೊ ನಾನು ಹರಿ ರೂಪ ರಾಘವರ ಮನವನರಿತು ಸೇವೆ ಮಾಡಿದ ದೂತನು ವನಧಿಯ ದಾಟಿ ಬಂದೆ, ವನಜಾಕ್ಷಿಗುಂಗುರವಿತ್ತೆ ವನವ ಕಿತ್ತೆ ಲಂಕೆ ಉರಿ ಮಾಡಿದೆ ||೬|| ರಾಮರ ದಯದಿಂದ ರಾಕ್ಷಸರನು ಗೆದ್ದೆ ಭೂಮಿ ದಾರ್‍ಇ ಹಿಡಿದೆಜ್ಞಶಾಲೆಯ ಆದರೇನಾಯಿತು ಹಾಟಕಾದ್ರಿ ಸರಿಯಾದ ಭಾಗವತ ತೋರಿಸಿದ ಗುರುಮುಖ್ಯಗೆ ||೭|| ಕಂಡೆನೇನಯ್ಯ ನಿನ್ನ ರೂಪ ಕಾಣದ ಮನುಜಗೆ ದಂಡಪ್ರಣಾಮ ಮಾಡಿ ದಾರಿತೋರಿದ ಪಾಂಡವನೆನಿಸಿ ದೊಡ್ಡ ಪರ್ವತದ ಮಧ್ಯದಲಿ ಚಂಡದೈತ್ಯರ ಸುತ್ತಿ ಚೆಂಡನಾಡಿದ ||೮|| ಶೀತಳ ಸರೋವರ ಶೀಘ್ರದಿಂದಲಿ ದಾಟಿ ನೂತನ ಕುಸುಮಂಗಳ ನೂರಾರು ತಂದು ಪ್ರೀತಿಯಿಂದಲಿ ತನ್ನ ಪ್ರಿಯಳಿಗಿತ್ತನು ಭ್ರಾತೃಗಳ ಪಡೆದ ಭಾಗ್ಯವೇನೆಂದ ||೯|| ಒಬ್ಬನೆ ಸಕಲ ಓದಿದ ಮನುಜಗೆ ಇಬ್ಬರ ಭಾಗವ ತೋರಿ ಈ ರೀತಿಯಿಂದ ಸಬ್ರಹ್ಮಪದವಿತ್ತ ಪುರಂದರವಿಠಲ ಸುಬ್ರಹ್ಮಣ್ಯ ವೇದಾಂತನಿಧಿಗೆ ||೧೦||
ದಾಸ ಸಾಹಿತ್ಯ ಪ್ರಕಾರ
ಬರೆದವರು