ನಮ್ಮ ದೇವ ನಿಮ್ಮ ದೇವ ತಮ್ಮ ದೇವನೆನಬೇಡಿ
೪-೧೩೧
(ರಾಗ ಬೇಹಾಗ್ ಆದಿತಾಳ )
ನಮ್ಮ ದೇವ ನಿಮ್ಮ ದೇವ ತಮ್ಮ ದೇವನೆನಬೇಡಿ
ಬೊಮ್ಮನ ಪಡೆದ ದೇವನೊಬ್ಬನೆ ಕಾಣಿರೋ ||ಪ ||
ಆದಿಯಲ್ಲಿ ಕರಿ ಮಕರಿಕೆ ಸಿಕ್ಕಿ ಬಾಧೆಯಿಂದ
ಆದಿದೇವ ಕಾಯೆಂದು ಮೊರೆಯಿಡಲು
ಆ ದೇವ ಈ ದೇವ ಕಾಯ್ದುದಿಲ್ಲ ಕೇಳಿ
ಮಾಧವ ತಾ ಬಂದು ಸಲಹಿದ ಕಾರಣ ||
ಹರಿ ಹರ ಬ್ರಹ್ಮರೊಳು ಹಿರಿಯವರಾರೆಂದು
ಪರಿಕಿಸಿ ಸುರಾಸುರರೆಲ್ಲರನು
ವರ ಭೃಗುಮುನಿ ಬಂದು ಕರವೆತ್ತಿ ಸ್ಥಿರವಾಗಿ
ಹರಿಯೇ ಪರದೈವವೆಂದು ಅರುಹಿದ ಕಾರಣ ||
ಏಕೋ ವಿಷ್ಣು ಎಂತೆಂದು ವೇದಗಳು ಅ-
ನೇಕಮುಖಗಳಿಂದ ಸಾರುತಿರೆ
ಕಾಕುಮತಿಯ ನೀಗಿ ಜೋಕೆಯಿಂ ಭಜಿಸಿರೊ
ಶ್ರೀಕಾಂತ ಪುರಂದರವಿಠಲರಾಯನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments