ನಂಬಿ ಭಜಿಸಿರೋ

ನಂಬಿ ಭಜಿಸಿರೋ

(ರಾಗ ಕಾಮವರ್ಧನಿ/ಪಂತುವರಾಳಿ ಛಾಪುತಾಳ ) ನಂಬಿ ಭಜಿಸಿರೋ ಜನರು ನಂಬಿ ಭಜಿಸಿರೋ ||ಪ|| ನಂಬಿ ಭಜಿಸಿ ಜನದ ಡಂಭಕತನವ ಬಿಟ್ಟು ಅಂಬುಜಾಕ್ಷ ಚಾಣೂರಮಲ್ಲಾರಿಯ ||ಅ|| ಚಲ್ಲಣವ ಉಟ್ಟು ತೊಟ್ಟು ಮಲ್ಲಗಟ್ಟ ಬಿಗಿದು ಕಟ್ಟಿ ಗೋವ- ಳೆಲ್ಲರೊಡನೆ ಕೂಡಿ ಪೊಕ್ಕು ಮಲ್ಲರಂಗವ ಬಲರಾಮ ಕೂಡಿ ಆಡಿ ಕು- ವಲಯಾಗಜವ ಪಿಡಿದು ಇಂಥಾ ಬಿಲ್ಲನು ಲಘು ಮಾಡಿದನೆಂಬ ಮಲ್ಲಾರಿಯ || ಅಟ್ಟಿಗುಟ್ಟಿ ತೋಳು ತೊಡೆಯ ತಟ್ಟಿ ಬೊಬ್ಬೆ- ನಿಟ್ಟು ಬೆನ್ನಟ್ಟಿ ಗಗನಕ್ಕೆ ಪುಟ ನೆಗೆಯುತ ಬಿಟ್ಟ ಮುಷ್ಟಿಕನ (ಮುಷ್ಟಿಗಳ ?) ಗೋಣು ಮೆಟ್ಯತುಳ ರಜಕ ಜಟ್ಟಿ ಮೆರೆದ ಚಾಣೂರ ಮಲ್ಲಾರಿಯ || ಕೊಂಬು ಕೊಳಲು ಜೆಕ್ಕೆ ಢಕ್ಕೆ ಬೊಬ್ಬಿಳಿಯಲ್ಲಿ ಬಾರಿಸುತ್ತ ಭೊಂ ಭೊಂ ಭೊಂ ಭೊಂಭೊಂ ಎಂಬ ಶಂಬರನ್ನ ರಭಸದಿ ಮಾಯವಿಡಲು ಅಂಬುಧಿಯೊಳಗಲ್ಲಾಡಿ ಅಂಬುಜಾಕ್ಷ ಚಾಣೂರಮಲ್ಲಾರಿಯ || ಮಂಡೆ ಗಲ್ಲವ ಪಿಡಿದು ದೈತ್ಯ ಬಿಡದೆ ಬಲದ ದೊಡ್ಡ ತಾಂಡವ ಚಾಣೂರ ಶಿರವ ಕಡಿಯುತ ಖಂಡ ತುಂಡ ಮಾಡಿ ಅಸುರ ಕಂಡು ಹಾ ಹಾ ಎನಲು ಜಗದಿ ಮೆರೆದ ಚಾಣೂರ ಮಲ್ಲಾರಿಯ || ಮಾವನ ಶಿರವ ಕಡಿದು ದೇವಕಿಗೆ ಸಂತೋಷವಿತ್ತ ದೇವ ಉಗ್ರಸೇನಗೊಲಿದು ಪಟ್ಟಗಟ್ಟಿದ ದೇವತೆಯರು ಗಗನದಲ್ಲಿ ಪೂವಿನ ಮಳೆಗರೆಯಲಾಗಿ ದೇವ ಪುರಂದರವಿಠಲರಾಯ ತಾನು ಮೆಚ್ಚಿದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು