ಧರ್ಮವೇ ಜಯವೆಂಬ ದಿವ್ಯ ಮಂತ್ರ

ಧರ್ಮವೇ ಜಯವೆಂಬ ದಿವ್ಯ ಮಂತ್ರ

( ರಾಗ ಸಾವೇರಿ. ಆಟತಾಳ) ಧರ್ಮವೇ ಜಯವೆಂಬ ದಿವ್ಯ ಮಂತ್ರ ||ಪ|| ಮರ್ಮವನರಿತು ಮಾಡಲುಬೇಕು ತಂತ್ರ ||ಅ|| ವಿಷವಿಕ್ಕಿದವಗೆ ಷಡ್ರಸವನುಣಿಸಲುಬೇಕು ದ್ವೇಷ ಮಾಡಿದವನ ಪೋಷಿಸಲು ಬೇಕು ಪುಸಿಯಾಡಿ ಕೆಡಿಸುವನ ಹಾಡಿ ಹರಸಲುಬೇಕು ಮೋಸ ಮಾಡುವನ ಹೆಸರು ಮಗನಿಗಿಡಲು ಬೇಕು || ಹಿಂದೆ ನಿಂದಿಪರನ್ನು ವಂದಿಸುತಲಿರಬೇಕು ಬಂಧನದೊಳಿಟ್ಟವರ ಬೆರೆಯ ಬೇಕು ಕೊಂದ ವೈರಿಯ ಮನೆಗೆ ನಡೆದು ಹೋಗಲು ಬೇಕು ಕುಂದೆಣಿಸುವವರ ಗೆಳೆತನ ಮಾಡಬೇಕು || ಕೊಂಡೊಯ್ದು ಬಡಿಯುವರ ಕೊಂಡಾಡುತಿರಬೇಕು ಕಂಡು ಸಹಿಸದವರ ಕರೆಯಬೇಕು ಪುಂಡರೀಕಾಕ್ಷ ಶ್ರೀ ಪುರಂದರ ವಿಟ್ಠಲನ ಕೊಂಡಾಡಿ ತಾ ಧನ್ಯನಾಗಬೇಕು ||
ದಾಸ ಸಾಹಿತ್ಯ ಪ್ರಕಾರ
ಬರೆದವರು