Skip to main content

ದೇವ ಬಂದ ನಮ್ಮ ಸ್ವಾಮಿ ಬಂದನೋ

( ರಾಗ ಶಂಕರಾಭರಣ ಆದಿತಾಳ)
ದೇವ ಬಂದ ನಮ್ಮ ಸ್ವಾಮಿ ಬಂದನೋ
ದೇವರ ದೇವ ಶಿಖಾಮಣಿ ಬಂದನೋ ||ಪ||

ಉರಗ ಶಯನ ಬಂದ ಗರುಡ ಗಮನ ಬಂದ
ನರಗೊಲಿದವ ಬಂದ ನಾರಾಯಣ ಬಂದ ||

ಮಂದರಧರ ಬಂದ ಮಾಮನೋಹರ ಬಂದ
ಬೃಂದಾವನಪತಿ ಗೋವಿಂದ ಬಂದನೋ ||

ಪೂತನಿ ಸಂಹರಣ ಬಂದ ಪುರುಹೂತವಂದ್ಯ ಬಂದ
ಮಾತುಳನ ಮಡುಹಿದ ಗೋವಿಂದ ಬಂದ ||

ನಕ್ರಹರನು ಬಂದ ಚಕ್ರಧರನು ಬಂದ
ಅಕ್ರೂರಗೊಲಿದ ತ್ರಿವಿಕ್ರಮನು ಬಂದನೋ ||

ಪಕ್ಷಿವಾಹನ ಬಂದ ಲಕ್ಷ್ಮಿ ರಮಣ ಬಂದ
ಅಕ್ಷಯ ಫಲದ ಲಕ್ಷ್ಮಣಾಗ್ರಜ ಬಂದ ||

ನಿಗಮಗೋಚರ ಬಂದ ನಿತ್ಯ ತೃಪ್ತನು ಬಂದ
ನಗೆಮುಖ ಪುರಂದರ ವಿಠಲ ಬಂದನೋ ||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: