ದಾಸನಾಗೋ ನೀ ಶಿಷ್ಯನಾಗೋ

ದಾಸನಾಗೋ ನೀ ಶಿಷ್ಯನಾಗೋ

(ರಾಗ ಕಾಂಭೋಜ ಏಕತಾಳ) ದಾಸನಾಗೋ ನೀ ಶಿಷ್ಯನಾಗೋ ||ಪ|| ಏಸು ಕಾರ್ಯಂಗಳ (ಕಾಯಂಗಳ ?) ಕಳೆದು ಎಂಭತ್ತು - ನಾಲ್ಕು ಲಕ್ಷ ಜೀವರಾಶಿಯನ್ನೆ ದಾಟಿ ||ಅ|| ಆಶಾಪಾಶ ಎಂಬೋ ಪರಮಾಬ್ಧಿಯೊಳಗೆ ಮುಳುಗಿ ಮಾಯಾ- ಪಾಶಕ್ಕೊಳಗಾಗದೇ ಮಾನ್ಯನಾಗೊ , ನೀ ಧನ್ಯನಾಗೊ || ಮಾಯದ ಗೂಡಿಗೆ ಸಿಕ್ಕಿ ಘಡಿಘಡಿಘಡಿಸುತ್ತ ರಘು- ರಾಮನೆಂಬೊ ವಸ್ತುವನ್ನು ಚೆನ್ನಾಗಿ ನಂಬೊ , ನೀನಾಗಿ ನಂಬೊ || ಈಗಲೋ ಆಗಲೋ ಇನ್ಯಾವಗಾಗಲೋ ಈ ಸಂಸಾರ ಹೋಗುವ ಜೀವಕ್ಕೆ ನಿನಗೆ ತಂದೆ ಯಾರೊ , ತಾಯಿ ಯಾರೊ || ಇತ್ತಲೋ ಅತ್ತಲೋ ಇನ್ನೆತ್ತಲೋ ಈ ಸಂಸಾರ ಮೃತ್ಯು ಇದು ನಿತ್ಯವೆಂದು ನಂಬಬೇಡೊ , ನೀ ನಂಬಬೇಡೊ || ಸೋರೆಯೊಳಗೆ ಮದ್ಯವ ತುಂಬಿ ಮೇಲೆ ಗಂಧಾಕ್ಷತೆ ಹಚ್ಚಿ ಮೇಲೆ ಹುವ್ವಿನ ಸರವನೆ ಧರಿಸಿದಂತೆ , ನೀ ಮರೆಸಿದಂತೆ || ಮೂರುಬಾರಿ ಶರಣು ಮಾಡಿ ನೀರವೊಳಗೆ ಮುಳುಗಿ ಪರನಾರೇರ ಮನಕ್ಕೆ ಸೆರೆಯ ಮಾಡಿ , ನೀ ಗುರಿಯ ಮಾಡಿ || ನಾರಾಯಣ ಅಚ್ಯುತ ಅನಂತ ಕೇಶವ ಕೃಷ್ಣನ್ನ ನಂಬಿ ಭಜಿಸೊ ಪುರಂದರವಿಠಲನ ಲಂಡ ಜೀವವೆ , ನೀ ಭಂಡ ಜೀವವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು