ದಾರಿ ಯಾವುದಯ್ಯ ವೈಕುಂಠಕ್ಕೆ

ದಾರಿ ಯಾವುದಯ್ಯ ವೈಕುಂಠಕ್ಕೆ

( ರಾಗ ಕಲ್ಯಾಣಿ. ಅಟ ತಾಳ)

 

ದಾರಿ ಯಾವುದಯ್ಯ ವೈಕುಂಠಕ್ಕೆ

ಹಾದಿ ತೋರಿಸಯ್ಯ ||ಪ||

ದಾರಿ ಯಾವುದಯ್ಯ ದಾರಿ ತೋರಿಸಯ್ಯ ಆ-

ಧಾರ ಮೂರುತಿ ನಿನ್ನ ಪಾದ ಸೇರುವುದಕ್ಕೆ ||ಅ||

 

ಬಲು ಭವದನುಭವದಿ ಕತ್ತಲೆಯೊಳು

ಬಲು ಅಂಜುತೆ ನಡುಗಿ

ಬಳಲುತ ತಿರುಗಿದೆ ಹಾದಿಯ ಕಾಣದೆ

ಹೊಳೆವಂಥ ದಾರಿಯ ತೋರೊ ನಾರಾಯಣ ||

 

ಪಾಪ ಪೂರ್ವದಲ್ಲಿ ಮಾಡಿದುದಕೆ

ಲೇಪವಾಗಿದೆ ಕರ್ಮ

ಈ ಪರಿಯಿಂದಲಿ ನಿನ್ನ ನೆನಸಿಕೊಂಬೆ

ಶ್ರೀಪತಿ ಸಲಹೆನ್ನ ಭೂಪ ನಾರಾಯಣ ||

 

ಇನ್ನು ನಾ ಜನಿಸಲಾರೆ ಭೂಮಿಯ ಮೇಲೆ

ನಿನ್ನ ದಾಸನಾದೆನೋ

ಪನ್ನಗ ಶಯನ ಶ್ರೀ ಪುರಂದರವಿಠಲ

ಇನ್ನು ಪುಟ್ಟಿಸದಿರೊ ಎನ್ನ ನಾರಾಯಣ ||

ದಾಸ ಸಾಹಿತ್ಯ ಪ್ರಕಾರ
ಬರೆದವರು