Skip to main content

ತೂಗಿರೆ ರಂಗನ ತೂಗಿರೆ ಕೃಷ್ಣನ

ಶಂಕರಾಭರಣ ರಾಗ/ಛಾಪುತಾಳ.

||ತೂಗಿರೆ ರಂಗನ ತೂಗಿರೆ ಕೃಷ್ಣನ||ಪ||

||ತೂಗಿರೆ ವರಗಿರಿಯಪ್ಪ ತಿಮ್ಮಪ್ಪನ|
||ತೂಗಿರೆ ಕಾವೇರಿ ರಂಗಯ್ಯನ||ಅ.ಪ||

||ನಾಗಲೋಕದಲ್ಲಿ ನಾರಾಯಣ ಮಲಗ್ಯಾನೆ|
||ನಾಗಕನ್ನಿಕೆಯರು ತೂಗಿರೆ||
||ನಾಗವೇಣಿಯರು ನೇಣು ಪಿಡಿದುಕೊಂಡು|
||ಬೇಗನೆ ತೊಟ್ಟಿಲ ತೂಗಿರೆ||೧||

||ಇಂದ್ರ ಲೋಕದಲ್ಲುಪೇಂದ್ರ ಮಲಗ್ಯಾನೆ|
||ಇಂದು ಮುಖಿಯರೆಲ್ಲ ತೂಗಿರೆ||
||ಇಂದ್ರ ಕನ್ನಿಕೆಯರು ಬಂದು ಮು|
||ಕುಂದನ ತೊಟ್ಟಿಲ ತೂಗಿರೆ||೨||

||ಆಲದೆಲೆಯ ಮೇಲೆ ಶ್ರೀಲೋಲ ಮಲಗ್ಯಾನೆ|
||ನೀಲ ಕುಂತಳೆಯರು ತೂಗಿರೆ||
||ವ್ಯಾಳ ಶಯನ ಹರಿ ಮಲಗು ಮಲಗು ಎಂದು|
||ಬಾಲ ಕೃಷ್ಣಯ್ಯನ ತೂಗಿರೆ||೩||

||ಸಾಸಿರ ನಾಮದ ಸರ್ವೋತ್ತಮನೆಂದು|
||ಸೂಸುತ್ತ ತೊಟ್ಟಿಲ ತೂಗಿರೆ||
||ಲೇಸಾಗಿ ಮಡುವಿನೊಳು ಶೇಷನ ತುಳಿದಿಟ್ಟ|
||ದೋಷ ವಿದೂರನ ತೂಗಿರೆ||೪||

||ಅರಳೆಲೆ ಮಾಗಾಯಿ ಕೊರಳ ಮುತ್ತಿನಹಾರ|
||ತರಳನ ತೊಟ್ಟಿಲ ತೂಗಿರೆ||
||ಸಿರಿದೇವಿ ರಮಣನ ಪುರಂದರ ವಿಠಲನೆ|
||ಕರುಣದಿ ಮಲಗೆಂದು ತೂಗಿರೆ||೫||

ನೇಣು: ಹಗ್ಗ.
ವ್ಯಾಳ: ಹಾವು, ಸರ್ಪ.

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

Comments

ಈ ರೀತಿ ಸಣ್ಣಪುಟ್ಟ ಪಾಠಾಂತರಗಳು ಇರುತ್ತವೆ. ಇದೇ ಸರಿ ಎಂದು ಹೇಳುವುದು ಬಹಳ ಕಷ್ಟ. ಅರ್ಥಕ್ಕೆ ತೊಂದರೆ ಇಲ್ಲದಿದ್ದಾಗ ಎರಡೂ ಸರಿಯೇ ಎನ್ನಬಹುದಷ್ಟೇ :)

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ತೂಗಿರೆ ರಂಗನ ತೂಗಿರೆ ಕೃಷ್ಣನ
ತೂಗಿರೆ ಅಚ್ಯುತಾನಂತನ
ತೂಗಿರೆ ವರಗಿರಿಯಪ್ಪ ತಿಮ್ಮಪ್ಪನ|
ತೂಗಿರೆ ಕಾವೇರಿ ರಂಗಯ್ಯನ

ಹೀಗೆ ನಾಕೂ ಸಾಲು ಸೇರಿದ ಪಲ್ಲವಿ ಎಂದುಕೊಳ್ಳಬಹುದು

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ಇನ್ನಷ್ಟು ಪಾಠಾಂತರ -

"ತೂಗಿರೆ ಅಚ್ಯುತಾನಂತನ" ಬದಲು "ತೂಗಿರೆ ಅಚ್ಯುತ ಅ-ನಂತನ" ಎಂದು ಒಂದು ಮಾತ್ರೆ ಹೆಚ್ಚಾಗಿದೆ.

"ಸಿರಿದೇವಿ ರಮಣನ ಪುರಂದರ ವಿಠಲನೆ" ಬದಲು "ಸಿರಿದೇವಿ ರಮಣನೆ ಪುರಂದರ ವಿಠಲನೆ" ಎಂದು ಎರಡು ಸಂಬೋಧನೆ.

ನನಗೆ, ಹಿಂದಿನ ಪರಿಚಯದಿಂದ ಇರಬಹುದು, ಎರಡನೆಯ ಪಾಠವೇ ಇನ್ನೂ ಚೆನ್ನಾಗಿ ಕಾಣುತ್ತದೆ. ಹೊಸದಾಗಿ ನೋಡುವವರಿಗೂ ಕಡೆಯ ಪದ್ಯದಲ್ಲಿ ಎರಡು ಸಂಬೋಧನೆ ಇರುವುದು ಚೆನ್ನ ಅನ್ನಿಸಬಹುದು.

ಈ ಕಡೆಯ ಪದ್ಯದ ಸಾಲುಗಳು (ಎರಡೂ ಪಾಠದಲ್ಲಿ) ಇನ್ನೊಂದು ರೀತಿ ಬಹಳ ಚೆನ್ನಾಗಿವೆ. ಇದನ್ನು ತಿಳಿಯಲು ಇದು ನಮ್ಮ ದೇಶದ ಯಾರೋ ಒಬ್ಬಾಕೆ ಹಳ್ಳಿಯವಳು ತನ್ನ ಕೂಸನ್ನು ಮಲಗಿಸಲು ಈ ಹಾಡು ಹಾಡುತ್ತಿರುವುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು (ನನ್ನ ಮಟ್ಟಿಗೆ ಇದು ನಡೆಯುವುದು ಶಂಕರಾಭರಣದಲ್ಲಲ್ಲ, ಜಂಜೂಟಿಯಲ್ಲಿ; ಇನ್ನೊಂದು ಪಾಠಾಂತರ!). ಆಕೆ ತನ್ನ ಮಗುವಿಗೆ ವಿಶೇಷ ಒಡವೆ ಏನೂ ಹಾಕದೆ (ಹಾಕಲಾಗದೆ) ಒಂದಷ್ಟು ಅರಳಿ ಎಲೆ, ಮಾವಿನ ಕಾಯಿನಲ್ಲಿ ಸರ ಮಾಡಿ ಹಾಕಿದ್ದಾಳೆ. ಮಗುವನ್ನು ನೀನೇ ರಂಗ ಎಂದುಕೊಂಡು ಆಡಿಸಿ ಮಲಗಿಸುತ್ತಿದ್ದಾಳೆ. ಹಿನ್ನೆಲೆಯಲ್ಲಿ ರಂಗನೂ ಈ ರೀತಿ ಹಳ್ಳಿಯಲ್ಲಿ ಬೆಳೆದ ಮಗು ಎನ್ನುವ ಭಾವ ಇದೆ. ಆದರೆ ಮೂರನೆಯ ಸಾಲಿನಲ್ಲಿ ಇಂತಹ ಅವನು (ತನ್ನ ಮಗುವಿನ ಜೊತೆಗೆ) "ಸಿರಿದೇವಿ ರಮಣ" ಆಗುತ್ತಾನೆ! ಬೇರೆ ಬೇರೆ ಲೋಕದ, ಬೇರೆ ಬೇರೆ ಜೀವಿಗಳ ಮಕ್ಕಳನ್ನು ಏಕೀಕರಿಸುವ ಹಾಡು, ಸಿರಿದೇವಿ ರಮಣ ಅರಳೆಲೆ ಮಾಗಾಯಿ ಸರ ಹಾಕಿಕೊಂಡು ಮಲಗಿರುವ ಪ್ಯಾರಡಾಕ್ಸಿನೊಡನೆ, ಆ ಪದಗಳಲ್ಲೇ ಬಡತನದ ಮಗುವಿನ ಐಶ್ವರ್ಯದ ಹಾರೈಕೆಯೊಡನೆ ಮುಗಿಯುತ್ತದೆ.

--ತುರಂಗ