Skip to main content

ತಾಸು ಬಾರಿಸುತಿದೆ ಕೇಳಿ

(ರಾಗ ಮಧ್ಯಮವತಿ ಆದಿತಾಳ)

ತಾಸು ಬಾರಿಸುತಿದೆ ಕೇಳಿ | ಹರಿದಾಸರೆಲ್ಲ || ಪ ||
ಶ್ರೀಶನ ಭಜನೆಯ ಮಾಡದ ಮನುಜನ ಆ | ಯುಷ್ಯವು ವ್ಯರ್ಥ ಹೋಯಿತು ಎಂದು ||ಅ.ಪ||

ಹಾಸು ಮಂಚ ಸುಪ್ಪತ್ತಿಗೆಯಲ್ಲಿ | ಹಗಲು ಇರುಳು |
ಹೇಸರಗತ್ತೆಯಂತೆ ಹೊರಳಿ | ಸ್ತ್ರೀಯರ ಕೂಡಿ |
ಬೇಸರಪಡದೆ ನಿತ್ಯ ಉರುಳಿ | ಈ ಪರಿಯಲಿ |
ಮನುಷ್ಯ ಆಯುಷ್ಯ ವೃಥಾ ವೃಥಾ ಹೋಯಿತು ಎಂದು ||

ಬಾಲ್ಯ ಯೌವನ ವೃದ್ಧಕಾಲ | ವಿವೇಕವಿಲ್ಲದೆ |
ಹಾಳಾಗಿ ಹೋಯಿತು ವ್ಯರ್ಥಕಾಲ | ಆಹಾರ ತಿಂದು |
ಭಾಳಾ ನಿದ್ರೆಯಿಂದ ಅತಿಲೋಲ | ಈ ಪರಿಯಿಂದಲಿ |
ಕಾಲನ ಮನೆಯು ಸಮೀಪವಾಯಿತು ಆಯಿತು ಎಂದು ||

ಕಂಡ ಕಂಡ ವಿಷಯವ ಕಾಮಿಸಿ |ಕಷ್ಟವ ಪಡದೆ |
ತಾಂಡವ ಶ್ರೀಕೃಷ್ಣನ ಭಜಿಸಿ | ಪುಂಡರೀಕಾಕ್ಷ |
ಪುರಾಣಪುರುಷನ ಪುರಂದರವಿಠಲನ |
ಭಜಿಸಿ ಬದುಕೆಂದು ಢಣ್ ಢಣ್ ಢಣಾ ಎಂದು ||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: