ತಾರಮ್ಮಯ್ಯ, ಯದುಕುಲ ವಾರಿಧಿ ಚಂದ್ರಮನ

ತಾರಮ್ಮಯ್ಯ, ಯದುಕುಲ ವಾರಿಧಿ ಚಂದ್ರಮನ

ರಾಗ ನಾದನಾಮಕ್ರಿಯ/ಆದಿ ತಾಳ ತಾರಮ್ಮಯ್ಯ, ಯದುಕುಲ ವಾರಿಧಿ ಚಂದ್ರಮನ || ಪಲ್ಲವಿ || ಮಾರಜನಕನ ಮೋಹನಾಂಗನ ಸೇರಿ ಸುಖಿಸಲು ಹಾರೈಸಿ ಬಂದೆವು || ಅನು ಪಲ್ಲವಿ || ಬಿಲ್ಲ ಹಬ್ಬಗಳಂತೆ, ಅಲ್ಲಿ ಬೀದಿ ಶೃಂಗಾರವಂತೆ ಮಲ್ಲರ ಕಾಳಗ ಮದ್ದಾನೆಯಂತೆ ಫುಲ್ಲಾಕ್ಷನು ತಾನಲ್ಲಿಗೆ ತೆರಳಿದ || ೧ || ಮಧುರಾಪುರಿಯಂತೆ, ಅಲ್ಲಿ ಮಾವ ಕಂಸನಂತೆ ಒದಗಿದ ಮದಗಜ ತುರಗ ಸಾಲಿನಲಿ ಮದಮೋಹನ ಕೃಷ್ಣ ಮಧುರೆಗೆ ತೆರಳಿದ || ೨ || ಅತ್ತೆ ಮಾವನ ಬಿಟ್ಟು, ಬಂದೆವು ಹಿತ್ತಲ ಬಾಗಿಲಿಂದ ಭಕ್ತವತ್ಸಲನ ಬಹು ನಂಬಿದ್ದೆವು ಉತ್ಸಾಹ ಭಂಗ ಮಾಡಿದನಮ್ಮ || ೩ || ರಂಗನ ಸೆರೆ ನಂಬಿ ಬಂದೆವು ಸಂಗ ಸುಖವ ಬಯಸಿ ಭಂಗಿಸಿ ನಮ್ಮನು ಹ್ಯಾಂಗೆ ಪೋದನಮ್ಮ ಮಂಗಳಮೂರುತಿ ಮದನಗೋಪಾಲನು || ೪ || ಶೇಷಗಿರಿಯ ಮೇಲೆ, ಹರಿ ತಾ ವಾಸವಾಗಿಹ ಕಾಣೆ ಸಾಸಿರನಾಮದ ಒಡೆಯನೆಂದನಿಸಿದ ಶ್ರೀಶ ಪುರಂದರವಿಠ್ಠಲರಾಯನ || ೫ || ~~~ * ~~~ [ಶ್ರೀ ಕೃಷ್ಣನು ಗೋಕುಲವನ್ನು ಬಿಟ್ಟು, ಮಥುರೆಗೆ ಹೋದ ಸಂಗತಿ ತಿಳಿದು ಗೋಕುಲದ ಗೋಪಿಯರು ಕೃಷ್ಣನ ವಿರಹದಿಂದ ವ್ಯಾಕುಲಗೊಂಡ ಬಗೆ ಇಲ್ಲಿ ವರ್ಣಿತವಾಗಿದೆ] ಪುರಂದರ ಸಾಹಿತ್ಯ ದರ್ಶನ - ಭಾಗ ೧
ದಾಸ ಸಾಹಿತ್ಯ ಪ್ರಕಾರ
ಬರೆದವರು