Skip to main content

ತನುವ ನೀರೊಳಗದ್ದಿ.

(ರಾಗ ಮಧ್ಯಮಾವತಿ ಅಟ ತಾಳ)

ತನುವ ನೀರೊಳಗದ್ದಿ ಫಲವೇನು
ಮನದಲ್ಲಿ ದೃಢ ಭಕ್ತಿ ಇಲ್ಲದ ಮನುಜನು

ದಾನ ಧರ್ಮಗಳನ್ನು ಮಾಡುವುದೆ ಸ್ನಾನ
ಜ್ಞಾನ ತತ್ವಂಗಳ ತಿಳಿವುದೆ ಸ್ನಾನ
ಹೀನ ಪಾಪಂಗಳ ಬಿಡುವುದೆ ಸ್ನಾನ
ಧ್ಯಾನದಿ ಮಾಧವನ ನೋಡುವುದೆ ಸ್ನಾನ

ಗುರುಗಳ ಪಾದ ದರ್ಶನವೆ ಸ್ನಾನ
ಹಿರಿಯರ ದರ್ಶನ ಮಾಡುವುದೇ ಸ್ನಾನ
ಕರೆದು ಅನ್ನವನಿಕ್ಕುವುದೊಂದು ಸ್ನಾನ
ನರಹರಿ ಚರಣ ನಂಬುವುದೆ ಸ್ನಾನ

ದುಷ್ಟರ ಸಂಗವ ಬಿಡುವುದೆ ಸ್ನಾನ
ಶಿಷ್ಟರ ಸಹವಾಸ ಮಾಡುವುದೆ ಸ್ನಾನ
ಸೃಷ್ಟಿಯೊಳಗೆ ಸಿರಿ ಪುರಂದರ ವಿಠಲನ
ಮುಟ್ಟಿ ಭಜಿಸಿದರೆ ವಿರಜಾ ಸ್ನಾನ

ದಾಸ ಸಾಹಿತ್ಯ ಪ್ರಕಾರ: 
ಬರೆದವರು: