ಜಾಣತನದ ಮಾತು ಏನು ಕೆಲಸವಯ್ಯ ಖೂನ ನೋಡಿ

ಜಾಣತನದ ಮಾತು ಏನು ಕೆಲಸವಯ್ಯ ಖೂನ ನೋಡಿ

( ಭೈರವಿ ರಾಗ ಕೇರವಾ ತಾಳ) ಜಾಣತನದ ಮಾತು ಏನು ಕೆಲಸವಯ್ಯ ಖೂನ ನೋಡಿ ಪ್ರಾಣನಾಯಕನ ತಿಳಿಯುದೊಂದೆ ಜ್ಞಾನಾಭ್ಯಾಸ ಮಾಡಿ ||ಧ್ರುವ|| ಕರಿಮಣಿ ಒಂದಿಲ್ಲದೆ ಹೆಂಗಸಿಗೆ ಸರಮುತ್ತು ಯಾಕೆ ಸಾರ ಸಂಜೀವನಿಲ್ಲದೆ ನೂರು ಗಿಡಮೂಲಿಕೆ ಯಾಕೆ ನೆರೆ ಇಲ್ಲದೆ ಸಾಧುಸಜ್ಜನರ ಸರ್ವಬಳಗವ್ಯಾಕೆ ಪರಮ ತತ್ವಜ್ಞಾನ ಒಂದಿಲ್ಲದೆ ಸುರಿಯುವ ಮಾತಿನ್ನ್ಯಾಕೆ ||೧|| ಪ್ರಾಣವಿಲ್ಲದ ಸುಂದರವಾದ ಶರೀರವ್ಯಾಕೆ ಖೂನವಿಲ್ಲದೆ ತನ್ನ ನೂರುಕಾಲ ಬದುಕುವದ್ಯಾಕೆ ಸ್ವಾನುಭವದ ಸುಖ ನೆಲೆಗೊಳ್ಳದೆ ಒಣ ಡಂಭವ್ಯಾಕೆ ತಾನಾಗಿಹ ವಸ್ತು ದೊರಕಿಲ್ಲದೆ ನಾ ನೀನೆಂಬುವದ್ಯಾಕೆ ||೨|| ಶ್ರೀಹರಿ ಮಹಿಮೆಯ ಸೋಹ್ಯ ತಿಳಿಯದೆ ದೇಹವ್ಯಾಕೆ ಗುಹ್ಯಗುರುತವಿಲ್ಲದೆ ಸಾಯಸಬಡುವದ್ಯಾಕೆ ಸಾಹ್ಯಮಾಡುವ ಸದ್ವಸ್ತು ನೋಡದ ಕಣ್ಣು ನೋಟವ್ಯಾಕೆ ಮಹಿಪತಿಸ್ವಾಮಿ ಸದ್ಗುರುಪಾದ ಕಾಣದ ಜನ್ಮವ್ಯಾಕೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು