ಜಯ ಮಂಗಳಂ ನಿತ್ಯ ಶುಭ ಮಂಗಳಂ

ಜಯ ಮಂಗಳಂ ನಿತ್ಯ ಶುಭ ಮಂಗಳಂ

(ರಾಗ ಭೈರವಿ ಛಾಪುತಾಳ) ಜಯ ಮಂಗಳಂ ನಿತ್ಯ ಶುಭ ಮಂಗಳಂ ||ಪ|| ಆಲನಾರಾಯಣಗೆ ಲಕ್ಷ್ಮೀಅರಸಗೆ ಕ್ಷೀರಸಾಗರದಲ್ಲಿ ನೆಲಸಿಹನಿಗೆ ಆಲದೆಲೆಯಲಿ ಮಲಗಿ ಲೋಲನಾಗಿದ್ದಂಥ ಸಾಕ್ಷಾತು ಪತಿಯ ವೆಂಕಟರಮಣಗೆ || ಗೋಕುಲದಲಿ ಹುಟ್ಟಿದವಗೆ ಗೋವುಗಳ ಕಾಯ್ದವಗೆ ಗೋಪಾಲ ಶ್ರೀಕೃಷ್ಣ ಎನಿಸಿಹಗೆ ಹದಿನಾಲ್ಕು ಲೋಕ ಬಾಯಲಿ ತೋರಿದಾತಗೆ ಸಾಕ್ಷಾತು ಪತಿಯ ವೆಂಕಟರಮಣಗೆ || ದಶರಥರಾಮನಿಗೆ ಅಸುರ ಸಂಹಾರಿಗೆ ಹೆಸರು ಸೀತಾಪತಿ ಎನಿಸಿಹಗೆ ಕುಶಲದಲಿ ಸೇತುವೆನು ಕಟ್ಟಿ ಮೆರೆದಾತನಿಗೆ ಸಾಕ್ಷಾತು ಪತಿಯ ವೆಂಕಟರಮಣಗೆ || ಶುಕ್ರವಾರದ ಪೂಜೆ ಪುನುಗಾಭಿಷೇಕದಾ ಸ್ವಾಮಿಪುಷ್ಕರಿಣಿಲಿ ಸ್ಬಾನವನೆ ಮಾಡಿ ಚಂದದಲಿ ತೀರ್ಥಪ್ರಸಾದ ಕಾಣಿಕೆಯಿತ್ತು ಸುತ್ತಲು ಗರುಡ ಕಂಭದ ಜ್ಯೋತಿಯ || ಗುತ್ತಿ ಗೊಂದಿಪುರ ಪುಟ್ಟಮಾಲಾದೇಶ ಇಕ್ಕೇರಿ ಶೃಂಗೇರಿ ಉಭಯಪುರ ಒಪ್ಪುವ ಚೋಳಮಂದಲ ಶ್ರೀಮಂಡಲ ಉಚ್ಚಾಹ ಬಂದ ಶ್ರೀವೆಂಕಟರಮಣ || ವಿಜಯನಗರ ಪಿಲುಪಕ್ಷಿಯಾನೆಗೊಂದಿ ಹರಿಹರ ವೈಲಾರ ಉಮಯಾಪುರ *ಗಜಗ ಲಕ್ಷ್ಮೀಸರ ಹೊಸಭಾನು ಹೊಸಪೇಟೆ ಉಡುಗರೆ ಬಂದ ವೆಂಕಟರಮಣಗೆ || ತೆಲುಗ ತಿಗಳ ಮಲೆಯಾಳ ಪಾಂಡವದೇಶ **ಗವುಳಿ ಗಜ್ಜಾಳಿ ಕರ್ಣಾಟ ದೇಶ ಉಡುಪಿ ಕಲ್ಲೂರು ಕೃಷ್ಣವೇಣಿ ಶ್ರೀರಂಗ ಮುಡುಪುಗಳು ಬಂದ ವೆಂಕಟರಮಣಗೆ || ತೊಟ್ಟಿಚಕ್ರದ ಕಪಿಲತೀರ್ಥಸ್ನಾನವ ಮಾಡಿ ಪಾಪವಿನಾಶಿನಿಯಲ್ಲಿ ಪಾಪವನೆ ಕಳೆದು ಕೋಟಿದೇವಿಗೆ ಕೋಟಿಪುಷ್ಪಗಳ ಸಮರ್ಪಿಸಿ ಸಹಸ್ರ ನೈವೇದ್ಯ ವೆಂಕಟರಮಣಗೆ || ಕೊಟ್ಟರೆ ವರಗಳನು ತಪ್ಪಿಲ್ಲವೆನುತಲೆ ಬೆಟ್ಟದ ಮೇಲೆ ತಾ ನೆಲಸಿಹಗೆ ಥಟ್ಟನೆ ತಿರುಪತಿ ಮೇಲೆ ನೆಲಸಿದ ಬೆಟ್ಟದ ಒಡೆಯ ಪುರಂದರವಿಠಲಗೆ || * ಗಜಗ = ಗದಗ , ಲಕ್ಷ್ಮೀಸರ= ಲಕ್ಷ್ಮೇಶ್ವರ ಇರಬಹುದು ** ಗವುಳಿ= ಗೌಡ ದೇಶ ?
ದಾಸ ಸಾಹಿತ್ಯ ಪ್ರಕಾರ
ಬರೆದವರು