ಜಯವದೆ ಜಯವದೆ, ಈ ಮನೆತನಕೆ

ಜಯವದೆ ಜಯವದೆ, ಈ ಮನೆತನಕೆ

(ರಾಗ ಪಕ್ಷಿಶಕುನ ಏಕತಾಳ) ಜಯವದೆ ಜಯವದೆ, ಈ ಮನೆತನಕೆ ಬಹಳ ಜಯವದೆ ||ಪ|| ಹಕ್ಕಿ ನುಡಿಯಿತಣ್ಣ ನುಡಿಯಿತು ಹಕ್ಕಿ ನುಡಿಯಿತು ಒಂದು ಶುಭವಚನ ಒಂದೆರಡಕ್ಷರ ಎರಡು ಮೂವತ್ತೆರಡಾಗಿ ನುಡಿಯಿತು ವಾಲ್ಮೀಕನ ಉದ್ಧರಿಸಿತು ಹಕ್ಕಿಶಕುನವು ಮುಕ್ಕಣ್ಣಗೆ ಜಯವಾಯಿತು ಪಾರ್ವತಿಗೆ ಮಾಂಗಲ್ಯವಾಯಿತು ಈರೇಳು ಜಗದೊಳಗೆ ಮೆಚ್ಚಿ ಪೆಸರುಳಿಸಿತಣ್ಣ ಉಳಿಸಿತು ಆ ನುಡಿ ಅಮೃತದ ನುಡಿ ಹನುಮಂತದೇವರಿಗೆ ವಜ್ರಕಾಯವ ಮಾಡಿತು ಅಂಬುಧಿಯ ಹಾರಿ ಲಂಕೆಯ ಸುಟ್ಟು ರಕ್ಕಸರ ಮಡುಹಿ ಸತ್ಯಲೋಕದ ಪದವಿಯನಿತ್ತು ಸಲಹಿತಣ್ಣ ಸಲಹಿತು ವಿಭೀಷಣನ ಚಿರಂಜೀವಿಯ ಮಾಡಿತು ಅಂಜದಿರಣ್ಣಾ ಅಂಜದಿರಯ್ಯ ಅಂಜದಿರು ಮೆಚ್ಚದಿರಯ್ಯಾ ಮೆಚ್ಚದಿರು ಮೆಚದಿರಣ್ಣಾ ಮೆಚ್ಚದಿರು || ಗಜಪುರವೆಂಬೋ ಪಟ್ಟಣದೊಳಗೆ ಶ್ರೀಶುಕನೆಂಬೋ ಪಕ್ಷಿ ನುಡಿಯಲಾಗಿ ಪರೀಕ್ಷಿತನೆಂಬವ ಶಕುನ ಕೇಳಿ ಇಂದ್ರಿಗಳನೆ ನಿಗ್ರಹಿಸಿ ಏಕಾಗ್ರಚಿತ್ತದಲಿ ಬಂಧಿಸಿ ಅರಿಷಡ್ವರ್ಗಗಳನ್ನೆ ತರಿದು ಹಿಂದಿನ ಹಕ್ಕಿಶಕುನದ ಫಲಗಳನುಂಡವರ ಮಾತು ಕೇಳಿದರಣ್ಣಾ ಕೇಳಿದರು ಅವರ್ಯಾರು ಎಂದರೆ ಅಂಬರೀಷರಾಯ ಪಶುಯೋನಿಗೆ ಬಂದ ಗಜರಾಯ ಶಿಶುವಾಗಿದ್ದ ಧ್ರುವ, ಪ್ರಹ್ಲಾದ, ಉದ್ಧವ, ಅಜಾಮಿಳ ಇವರನೇಕರಿಗೆ ಫಲವಾಯಿತಣ್ಣಾ ಫಲವಾಯಿತು ಅಂಜದಿರಣ್ಣಾ ಅಂಜದಿರು ಅಂಜದಿರಯ್ಯ ಅಂಜದಿರು ಮೆಚ್ಚದಿರಯ್ಯಾ ಮೆಚ್ಚದಿರು ಮೆಚದಿರಣ್ಣಾ ಮೆಚ್ಚದಿರು || ಈ ಸಂಸಾರವೆಂಬೋ ಮರ್ಕಟನಾಟಕವಾ ಮೆಚ್ಚದಿರು ಉಚ್ಚೆ ಬಚ್ಚಲು ಎಂಬೊ ಕುಕ್ಷಿಯಲಿ ಪುಟ್ಟಿ ಎಂಭತ್ತನಾಲ್ಕು ಲಕ್ಷ ಯೋನಿಗಳಲ್ಲಿ ಪುಟ್ಟಿ ಪುಟ್ಟಿ ಎಲುವಿನ ಪಂಜರ ನರಗಳ ಬಿಗುವು ತೊಗಲಿನ ಹೊದ್ದಿಕೆ ರೋಮಗಳ ಕಸ ಮಧ್ಯ ಮಾಂಸಗಳ ತಿತ್ತಿ ಈ ನವದ್ವಾರಗಳಿಂದ ಜನಿಸಿದ ದುರ್ಗಂಧ ಶರೀರವ ಮೆಚ್ಚದಿರು ಬಿಡು ಬಿಡು ಕಾಮವ ಬಿಡು ಕ್ರೋಧವ ಬಿಡು, ಲೋಭವ ಬಿಡು ಮೋಹವ ಬಿಡು , ಮದಮತ್ಸರಹಂಕಾರವ ಬಿಡು ನೋಡು ನೋಡು ನಿನ್ನೊಳಗೆ ನೀನೇ ತಿಳಿದು ನೋಡು ಮನವ ನರಹರಿಯ ಚರಣಕ್ಕೆ ಸಮರ್ಪಣೆಯ ಮಾಡು ಬೇಡು ಬೇಡು ಆತನ ಚರಣವ ಬಿಡದಿರು ಹರಿದಾಸರ ಸಂಗವ ಬಿಡದಿರು ಎನ್ನ ಶಕುನದಲಿ ವಿಶ್ವಾಸವ ಬಿಡದಿರು ಇದೇ ಮುಕುತಿಪಥಕೆ ಪಥ ಶ್ರೀ ಪುರಂದರವಿಠಲನ್ನ ನಾಮ ಸಂಕೀರ್ತನೆಯ ಬಿಡದಿರು ||
ದಾಸ ಸಾಹಿತ್ಯ ಪ್ರಕಾರ
ಬರೆದವರು