ಗೋಪಿಯರು ಕೃಷ್ಣನ ವಿರಹಪ್ರಲಾಪದಿಂದ( ಉದಯರಾಗ )

ಗೋಪಿಯರು ಕೃಷ್ಣನ ವಿರಹಪ್ರಲಾಪದಿಂದ( ಉದಯರಾಗ )

ಗೋಪಿಯರು ಕೃಷ್ಣನ ವಿರಹಪ್ರಲಾಪದಿಂದ ಮಥುರಾಪುರದ ಬಿಲ್ಲ ಹಬ್ಬವ ಜರೆದರು ||ಪ|| ಅಕ್ರೂರನೆಂಬ ಕಲಿಹೃದಯ ಬಂದು ನಮ್ಮನ- ತಿಕ್ರಮಿಸಿ ಕೃಷ್ಣನ ಪುರಕೆ ನಡೆಸಿದ ವಕ್ರನಾದನು ನಮ್ಮ ಕ್ರೀಡೆಗಳಿಗೆ ಅಕಟ ಈ ಕ್ರೂರಗಕ್ರೂರ ಪೆಸರೇತಕೆನುತ || ರಥವ ನಿಲ್ಲಿಸದೆ ಮೋಸ ಹೋದೆವಲ್ಲ ಮನೋರಥ ಸಿದ್ಧಿ ಕೊನೆಸಾಗಲಿಲ್ಲ ರತಿಪತಿಯ ಪಿತನಗಲಿ ಕೆಟ್ಟೆವಲ್ಲ ಇನ್ನು ಗತಿ ಯಾರು ನಮ್ಮ ಸಂತೈಪರಾರೆನುತ || ಈ ಪಳ್ಳಿಯೊಳು ನಮಗೆ ಬಂದಂಥ ಪ್ರಳಯದ ಆಪತ್ತುಗಳನೆಲ್ಲ ಪರಿಹರಿಸುವ ಗೋಪಾಲನಿಂದ ಬಂದ ಈ ಪ್ರಳಯ(ಪ್ರಣಯ?) ತಾಪ ಹರಿಸಲಾಪರುಂಟೆ ಪೇಳಿರೇನುತ || ಯುಗವೊಂದು ನಿಮಿಷವಾಗಿದ್ದೆವಲ್ಲ ಅವನ ನಗೆನೋಟ ಕೂಟಬೇಟಗಳಿಂದ ಅಗಲಿ ಪೋದನು ಕೃಷ್ಣ ಇಂದು ನಮಗೆ ನಿಮಿಷ ಯುಗವಾಗಿ ತೋರುತಿನ್ನೇನುಪಾಯವೆನುತ || ಯಾಕೆಮ್ಮ ಪುಟ್ಟಿಸಿದೆ ವಿಧಿಯೆ, ನಮಗಿನ್ನೇಕೇ ಶ್ರೀ ಕೃಷ್ಣನಿಲ್ಲದ ಸಡಗರ, ಭ್ರಮರ ಕೋಕಿಲಾರವದಿ ಕೋಳುಹೋದೆವಲ್ಲ ಕಾಕು ಮಾಡಿತು ಕಂದರ್ಪನಸ್ತ್ರವು ಎನುತ || ಕಂಗಳ ಬಿಟ್ಟಗಲಿ ದೂರದಿ ನಮ್ಮ ಮ- ನಂಗಳಲಿ ನೆಲೆಕೊಂಡು ಇರಲೇತಕೆ ಭಂಗ ಪಡಿಸುವ ನಾನಾ ಪರಿಯಲಿ ಗೋವಳ ಹೆಂಗೊಲೆಗೆಳೆವುದನು ನಾವರಿತುದಿಲ್ಲವೆನುತ || ಕೊಂಬು ಕೊಂಕುಳಲಿ ಶಲ್ಯಗಳ ಪಿಡಿದು ಹೆಗಲ ಕಂಬಳಿಯ ಪೂದಳಿರಲತೆಯನುಟ್ಟು ತುಂಬಿಗುರುಳಲಿ ಎಸೆವ ಕೆಂದೂಳಿ ನೀರ ಜಾಂಬಕನ ಕಾಣದಿನ್ನೆಂತುಳಿಯುವೆವೆನುತ || ಅವನ ಲಾವಣ್ಯ ಮೂರುತಿ ನೋಡಿ ಕಂಗಳು ಅವನ ಜಾಣುವೆ ನುಡಿಗೇಳಿ ಕಿವಿಯು ಅವನ ಅಧರಾಮೃತವ ಸವಿ ಸವಿದು ಜಿಹ್ವೆ ದಿವಸಗಳ ಕಳೆಯಲಿನ್ನೆಂತುಪಾಯವೆನುತ || ಕೊಳಲ ಧ್ವನಿಯ ಕೇಳಿ ದೂರದಿಂದ ಕೈಯ ಕೆಲಸಗಳನು ಬಿಟ್ಟು ಬರುವೆವಲ್ಲ ಕೊಳಲೂದಿ ಸೋಲಿಸುವರಿನ್ನಾರು, ಮನದ ಅಳವರಿತು ನಮ್ಮ ಸಂತವಿಪರಾರೆನುತ || ಮೌನ ಗೌರಿಯ ನೋನೆ ಯಮುನೆಯೊಳಗೆ ನಮ್ಮ ಮಾನಗಳ ಬಯಲು ಮಾಡಿದ ಮೂರ್ತಿಯ ಧ್ಯಾನಿಸಲು ಕಣ್ಣ ಮುಂದಿದ್ದಂತಿರೆ ನಾವಿನ್ನೇನ ನೆನೆದು ಹಂಬಲಿಸುವೆವೆನುತ || ಕಾರಮುಗಿಲೊಳು ಹೊಳೆವ ಮಿಂಚಿನಂತೆ ಮುಕುಟ ಹಾರ ಹೀರಾವಳಿಯ ಪದಕೊಪ್ಪುವ ವಾರಿಗೆ ಗೋಪಾಲರೊಡನಾಡೊ ನಂದಕು- ಮಾರನ ಕಾಣದಿನ್ನೆಂತುಳಿವೆವೆನುತ || ಜ್ಯೋತಿಲ್ಲದಿರುಳಿನ ಗೃಹದಂತಿರೆ ಪರಂ- ಜ್ಯೋತಿಯನಗಲಿದ ಈ ತನುಗಳ ಯಾತಕ್ಕೆ ಸುಡಲೆನುತ ಕಡುನೊಂದು ಲಕ್ಷ್ಮೀ- ನಾಥ ನಮ್ಮಯ ಮನಕೆ ಗೋಚರಿಸು ಎನುತ || ಹಿಮಕರನ ಕಿರಣ ಒಸರುತಿವೆಯೇಕೊ ಅವನ ಕಮನೀಯ ಪೇರುರವನಾಲಿಂಗಿಸಿ ಯಮುನೆ ಮಳಲತಟದೊಳೊಪ್ಪುವ ಕೃಷ್ಣನ ರಮಿಸುವಾನಂದ ಸುಖವೆಂತಪ್ಪುದೆನುತ || ಮಧುರೆಯಲಿ ಬಿಲ್ಲ ಹಬ್ಬ ಪುಟ್ಟಿಸಿ ಕುಟಿ- ಲದಲಿಯೆಮ್ಮ ಪ್ರಾಣಪತಿಯ ಕರೆಸಿದ ಸುದತಿಯರ ಮನದಳಲು ತಟ್ಟದಿಹುದೆ ನಮ್ಮ ಎದೆಗಿಚ್ಚು ಕಂಸನ ತಲೆಗೆ ಮೂಡಲಿ ಎನುತ || ಈ ಪರಿ ಹಂಬಲಿಸುವ ನಮ್ಮನತಿ ದ- ಯಾಪರಮೂರ್ತಿ ಉದ್ಧವನ ಕಳುಹಿಸಿ ರೂಪಿಸಿದ ಕುರುಹಿಂದಲೆಮ್ಮ ಪೊರೆವಭಿನವ ಪುರಂದರವಿಠಲನೆಂದಿಗು ಬಿಡನೆನುತ ||
ದಾಸ ಸಾಹಿತ್ಯ ಪ್ರಕಾರ
ಬರೆದವರು