ಗುಮ್ಮನೆಲ್ಲಿಹ ತೋರಮ್ಮ

ಗುಮ್ಮನೆಲ್ಲಿಹ ತೋರಮ್ಮ

( ರಾಗ ತೋಡಿ ಆದಿ ತಾಳ) ಗುಮ್ಮನೆಲ್ಲಿಹ ತೋರಮ್ಮ ಸುಮ್ಮನಂಜಿಸಬೇಡಮ್ಮ ||ಪ|| ಪಂಚಾಶತ್ಕೋಟಿ ವಿಸ್ತೀರ್ಣದ ಭೂಮಿಯ ವಂಚನೆಯಿಲ್ಲವೆ ತಿರುಗಿ ಬಂದೆನೆ ನಾನು ಹಂಚಿಸಿ ಕೊಟ್ಟನೆ ಅವರವರಿಗೆ ನಾ ಹಾಂಗು ನೋಡಿದರು ಕಾಣೆನೆ ಗುಮ್ಮನ || ಸಿಂಧುವಿನೊಳಗೆ ಆನಂದದಿ ಮಲಗಿದ್ದೆ ಒಂದು ನಾಭಿಕಮಲದಿ ಬೊಮ್ಮನ ಪುಟ್ಟಿಸಿದೆ ಅಂಧಕಾರದಿ ಪೋಗಿ ಒಬ್ಬನೆ ಮಲಗಿದೆ ಹಾಂಗು ನೋಡಿದರು ಕಾಣೆನೆ ಗುಮ್ಮನ || ಈರೇಳು ಲೋಕವ ಉದರದೊಳಗೆ ಇಟ್ಟು ತೋರಿದೆ ಬ್ರಹ್ಮಾಂಡವ ಬಾಯಲಿ ನಾನು ಘೋರ ರೂಪದಿ ಬಂದ ಗಾಳಿ ಅಸುರನ ಕೊಂದೆ ಹಾಂಗು ನೋಡಿದರು ಕಾಣೆನೆ ಗುಮ್ಮನ || ಕಾಳಿಯ ಮಡು ಧುಮುಕಿ ಕಾಳಿಂಗನ ಹೆಡೆ ತುಳಿದು ಮೇಲೆ ನಾನಾ ವಿಧನಾಟ್ಯವಾಡುತಲಿದ್ದೆ ಒಲಿದು ಭಾಗ್ಯವನಿತ್ತೆ ನಾಗಪತ್ನಿಯರಿಗೆ ಹಾಂಗು ನೋಡಿದರು ಕಾಣೆನೆ ಗುಮ್ಮನ || ಅಕ್ರೂರಗೆ ವಿಶ್ವ ರೂಪವ ತೋರಿದೆ ಘಕ್ಕನೆ ರಥವೇರಿ ಮಧುರೆಗೆ ಪೋದೆ ಸೊಕ್ಕಿದ ರಜಕನ ಕೊಂದು ಮಡಿಯನುಟ್ಟೆ ಹಾಂಗು ನೋಡಿದರು ಕಾಣೆನೆ ಗುಮ್ಮನ || ಬಿಲ್ಲುಹಬ್ಬಕೆ ಪೋಗಿ ಮಲ್ಲರ ಮಡುಹಿದೆ ಅಲ್ಲಿ ಮಾವನ ಕೊಂದು ಮುತ್ಯಗೆ ಒಲಿದೆ ಚೆಲ್ವ ಗೋಪಾಲ ಶ್ರೀ ಪುರಂದರವಿಠಲನ ಬಾರಿ ಬಾರಿಗೆ ನೀ ಬೆದರಿಸಬೇಡಮ್ಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು