ಗಿಳಿಯು ಪಂಜರದೊಳಿಲ್ಲಾ

ಗಿಳಿಯು ಪಂಜರದೊಳಿಲ್ಲಾ

ಆನಂದಭೈರವಿ ರಾಗ/ಅಟ್ಟತಾಳ ||ಗಿಳಿಯು ಪಂಜರದೊಳಿಲ್ಲಾ|| ಪ|| ||ಶ್ರೀ ರಾಮ ರಾಮಾ ಬರಿದು ಪಂಜರವಾಯಿತಲ್ಲಾ|| ಅ ಪ|| ||ಅಕ್ಕ ನಿನ್ನ ಮಾತು ಕೇಳಿ ಚಿಕ್ಕದೊಂದು ಗಿಳಿಯ ತಂದು ಸಾಕಿದೆ|| ||ಅಕ್ಕ ನಾನಿಲ್ಲದ ವೇಳೆ ಬೆಕ್ಕು ಕೊಂಡು ಹೋಯಿತಯ್ಯೋ|| ೧|| ||ಅರ್ತಿಗೊಂದು ಗಿಳಿಯ ಸಾಕಿದ ಮುತ್ತಿನಹಾರವ ಹಾಕಿದೆ|| ||ಮುತ್ತುಗೊಂಡು ಗಿಳಿಯು ತಾನು ಎತ್ತ ಓಡಿ ಹೋಯಿತಯ್ಯೋ|| ೨|| ||ಹಸಿರು ಬಣ್ಣದ ಗಿಳಿಯು ಕುಶಲ ಬುದ್ಧಿಯ ಗಿಳಿಯು|| ||ಅಸುವ ಕುಂದಿ ಗಿಳಿಯು ತಾನು ಹಸನಗೆಡಿಸಿ ಹೋಯಿತಯ್ಯೋ|| ೩|| ||ಮುಪ್ಪಾಗದ ಬೆಣ್ಣೆಯನು ತಪ್ಪದೇ ನಾ ಹಾಕಿದೆ ಸಾಕಿದೆ|| ||ಒಪ್ಪದಿಂದ ಗಿಳಿಯು ಈಗ ತೆಪ್ಪನೇ ಹಾರಿ ಹೋಯಿತಯ್ಯೋ|| ೪|| ||ರಾಮ ರಾಮ ಎಂಬೋ ಗಿಳಿ ಕೋಮಲ ಕಾಯದ ಗಿಳಿ|| ||ಸಾಮಜ ಪೋಷಕ ತಾನು ಪ್ರೇಮದಿ ಸಾಕಿದ ಗಿಳಿ|| ೫|| ||ಒಂಬತ್ತು ಬಾಗಿಲ ಮನೆ ತುಂಬುವ ಸಂದಣಿಯಿರಲು|| ||ಕುಂಭ ಮುರಿದು ಡಿಂಭ ಬಿದ್ದು ಅಂಬರಕೆ ಹಾರಿತಯ್ಯೋ|| ೬|| ||ಅಂಗೈಯಲಾಡುವ ಗಿಳಿ ಮುಂಗೈಯ ಮೇಲಣ ಗಿಳಿ|| ||ರಂಗ ಪುರಂದರವಿಠಲನಂತ ರಂಗದಿ ಭಜಿಸುವ ಗಿಳಿ|| ೭||
ದಾಸ ಸಾಹಿತ್ಯ ಪ್ರಕಾರ
ಬರೆದವರು