Skip to main content

ಗತಿಯಾವುದೆನಗೆ ಶ್ರೀಪತಿಯೆ ಪೇಳೊ

----- ರಾಗ ಕಾಂಬೋಧಿ (ಬಾಗೇಶ್ರೀ) ಝಂಪೆತಾಳ

ಗತಿಯಾವುದೆನಗೆ ಶ್ರೀಪತಿಯೆ ಪೇಳೊ ||ಪ||
ಮತಿಗೆಟ್ಟು ಪ್ರತಿದಿನದಿ ಸತಿಯ ಬಯಸುವೆನೊ ||ಅ.ಪ||

ಮರುಳುಬುದ್ಧಿಗಳಿಂದ ಕರಸೂಚನೆಯ ಮಾಡಿ
ತರಳೆಯರ ತಕ್ಕೈಸಿ ಸರಸವಾಡಿ
ಇರುಳು ಹಗಲು ಹೀಗೆ ದುರುಳತನದಲಿ ತಿರುಗಿ
ಧರೆಯೊಳಗೆ ನಾನೊಬ್ಬ ಹರಿದಾಸನೆನಿಸಿದೆನು ||೧||

ನಾಚಿಕೆಯ ತೊರೆದು ಬಲು ನೀಚರಲ್ಲಿಗೆ ಪೋಗಿ
ಯಾಚಿಸುವೆ ಸುವಿಚಾರಹೀನನಾಗಿ
ಆ ಚತುರ್ದಶ ವರುಷದಾರಭ್ಯ ಈ ವಿಧದಿ
ಆಚರಿಪೆನೈ ಸವ್ಯಸಾಚಿಸಖ ಕೃಷ್ಣ ||೨||

ನಾನು ನನ್ನದು ಎಂಬ ಹೀನಬುದ್ಧಿಗಳಿಂದ
ಜ್ಞಾನಶೂನ್ಯನು ಆದೆ ದೀನಬಂಧು
ಸಾನುರಾಗದಿ ಒಲಿದು ನಾನಾಪ್ರಕಾರದಲಿ
ನೀನು ಪಾಲಿಸು ಹರಿಯೆ ಜ್ಞಾನಗುಣಪರಿಪೂರ್ಣ ||೩||

ಅಂಬುಜಾಕ್ಷನೆ ನಿನ್ನ ನಂಬಿ ಭಜಿಸುವರ ಪಾ-
ದಾಂಭುಜಕ್ಕೆರಗದಲೆ ಸಂಭ್ರಮದಲಿ
ತಂಬೂರಿಯನು ಪಿಡಿದು ಡಂಭತನದಲಿ ನಾನು
ಶಂಬರಾರಿಗೆ ಸಿಲುಕಿ ಬೆಂಬಿಡದೆ ಚಾಲ್ವರಿದೆ ||

ಪರಮೇಷ್ಟಿಯಾರಭ್ಯ ತೃಣಜೀವ ಪರಿಯಂತ
ತರತಮಂಗಳ ತಿಳುಹಿ ತರುವಾಯದಲ್ಲಿ
ಗುರುಹಿರಿಯರಲಿ ಭಕುತಿ ವೈರಾಗ್ಯವನೆ ಕೊಟ್ಟು
ಸಿರಿಜಗನ್ನಾಥವಿಠಲ ನಿರುತ ನೀ ಪೊರೆಯದಿರೆ ||೫||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: