ಕೆಟ್ಟಿತು ಕೆಲಸವೆಲ್ಲ

ಕೆಟ್ಟಿತು ಕೆಲಸವೆಲ್ಲ

(ರಾಗ ರೇಗುಪ್ತಿ ಅಟತಾಳ ) ಕೆಟ್ಟಿತು ಕೆಲಸವೆಲ್ಲ ,ಲೋಕದಿ ಕಾಮ ನಟ್ಟುಳಿ ಘನವಾಯಿತು ಬಟ್ಟೆ ತಪ್ಪಿ ಮುಂದೆ ಕೆಟ್ಟು ಕರ್ಮಿಯಾಗಿ ಬಿಟ್ಟು ಮುಂದಣ ಪಥವ, ಹೇ ದೇವ || ಪ|| ಸತ್ಯ ಶೌಚ ಕರ್ಮವು ಧರ್ಮದ ಬಲ ಮತ್ತೆ ಅಡಗಿಹೋಯಿತು ಎತ್ತ ನೋಡಲು ನೀಚವೃತ್ತಿಯು ತುಂಬಿ ಅತ್ಯಂತ ಪ್ರಬಲವಾಯಿತು, ಹೇ ದೇವ || ಹೊತ್ತುಹೊತ್ತಿಗೆ ಹಲವು ಲಂಪಟತನದಿ ಚಿತ್ತ ಚಂಚಲವಾಯಿತು ಸತ್ತು ಹುಟ್ಟುವ ಸುಳಿಯಲ್ಲದೆ ಮತ್ತೊಂದು ಗೊತ್ತು ಇಲ್ಲದೆ ಹೋಯಿತು, ಹೇ ದೇವ || ಪೇಳುವುದೇನಿನ್ನು ದುರ್ಜನಸಂಗ - ದೋಲಾಟ ಸೊಗಸಾಯಿತು ಕೀಳು ಮೇಲು ಮೇಲು ಕೀಳಾಗಿ ನಡೆವುದು ಕಾಲ ವೆಗ್ಗಳವಾಯಿತು , ಹೇ ದೇವ || ಆಳುವ ನೃಪರಿಗೆಲ್ಲ ಕಾಂಚನದಾಸೆ ಮೇಲು ಮೇಲಾಯಿತಯ್ಯ ನೀಲಮೇಘಶ್ಯಾಮನೆನ್ನಾಳೆಂಬವರಿಗೆ ಕೂಳು ಹುಟ್ಟದೆ ಹೋಯಿತು , ಹೇ ದೇವ || ಅರಿಷಡ್ವರ್ಗದಲಿ ಸಿಲುಕಿ ಜ್ಞಾನದ ಅರಿವು ಇಲ್ಲದೆ ಹೋಯಿತು ಕರುಣಾಳು ಸೊಬಗು ಶ್ರೀಪುರಂದರವಿಠಲನ ಸ್ಮರಣೆಯಿಲ್ಲದೆ ಹೋಯಿತು , ಹೇ ದೇವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು