ಕಾಗೆ ಕೂಗಿತಲ್ಲ ಈಗ

ಕಾಗೆ ಕೂಗಿತಲ್ಲ ಈಗ

(ರಾಗ ಪೂರ್ವಿ ಅಟತಾಳ) ಕಾಗೆ ಕೂಗಿತಲ್ಲ, ಈಗ ಒಂದು ಕಾಗೆ ಕೂಗಿತಲ್ಲ ||ಪ|| ಎಲ್ಲರೇಳದ ಮುನ್ನ ಗುಲ್ಲು ಮಾಡುತಲೆದ್ದು ಚೆಲ್ಲಿದ ಧನಧಾನ್ಯವ ಮೆಲ್ಲುತ ಮಲ್ಲಿಗೆ ಮುಡಿಯವರು ಮರೆದೊರಗಲು ಬೇಡಿ ಫುಲ್ಲನಾಭನ ಪೂಜಾಸಮಯವಿದೆಂದು || ಯಾರು ಏಳದ ಮುನ್ನ ಓರಂತೆ ತಾನೆದ್ದು ಕೇರಿಕೇರಿಯಲಿ ಸಂಚರಿಸುತ ಓರೆ ಮೋರೆಯ ಮೂರು ಕಡೆಗೆ ತಿರುಗಿಸುತ್ತ ಊರಿಂದ ಬರುವ ನೆಂಟರು ಪೇಳ್ವ || ಪಿತೃಗಳ ಕಾರ್ಯಕೆ ಅಗತ್ಯವಾಗೋದು ಹತವಾದವರ ಕಾಂಕ್ಷಾ ತಿಳಿಸುವುದು ಅತಿಹೇಯವಸ್ತು ಈ ಕಾಗೆಯೆನಲು ಬೇಡಿ ಹಿತವಾದ ಶಕುನವ ನುಡಿವುದೀ ಕಾಗೆ || ಕಷ್ಟವ ಇಷ್ಟವನಿಷ್ಟವ ಸಾರುತ್ತ ಸೃಷ್ಟಿಸಂಪದವ ಕೈಗೂಡಿಸುತ್ತ ಶ್ರೇಷ್ಠ ಬ್ರಾಹ್ಮರ ಬಲಿಹರಣವ ತಿಂದು ಪಟ್ಟಸಾಲೆ ಮೇಲೆ ಕೂಗುವ ಕಾಗೆ || ಮಂಗಳಮಹಿಮಗೆ ಮಹಲಕ್ಷ್ಮೀಯರಸಗೆ ಹಿಂಗದೆ ಮಾನವಪ್ರಿಯನಿಗೆ ಗಂಗೆಯ ಪಿತ ಶ್ರೀಪುರಂದರವಿಠಲನ್ನ ಸಿಂಗಾರದ ಪೂಜೆಸಮಯವೆಂದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು