ಕಲಿಯುಗದ ಮಹಿಮೆಯು ಕಾಣಬಂತೀಗ

ಕಲಿಯುಗದ ಮಹಿಮೆಯು ಕಾಣಬಂತೀಗ

(ರಾಗ ಕಾಂಭೋಜ ಝಂಪೆ ತಾಳ) ಕಲಿಯುಗದ ಮಹಿಮೆಯು ಕಾಣಬಂತೀಗ ಜಲಜಾಕ್ಷ ಮೇಲ್ಗಿರಿಯ ಶ್ರೀವೆಂಕಟೇಶ ||ಪ|| ಹರಿಕಥೆಯನೆ ಬಿಟ್ಟು ಹೀನನುಡಿ ನುಡಿಯುವರು ಗುರುಹಿರಿಯರ ದೂಷಿಸಲು ಎಣಿಸುವರು ಪೊರೆದ ತಾಯ್ತಂದೆಗಳ ಮಾತುಗಳ ಮನ್ನಿಸದೆ ತರುಣಿಯರ ನುಡಿಗೇಳಲಿಚ್ಛಿಸುತ್ತಿಹರು || ಪಟ್ಟದರಸಿಯ ಬಿಟ್ಟು ಪರಸತಿಯ ಬಯಸುವರು ಕೊಟ್ಟ ಸಾಲವ ನುಂಗಿಕೊಳಲೆಣಿಪರು ಮುಟ್ಟಿ ಭಾಷೆಯ ಕೊಟ್ಟು ಮೋಸವನೆ ಮಾಡುವರು ಬಿಟ್ಟು ಪರದೈವವನು ಮಾರಿಗೆರಗುವರು || ಕಂಡುದನು ಹೇಳರು ಕಾಣದನೆ ಪೇಳುವರು ಉಂಡ ಮನೆಗೆರಡನ್ನು ಬಗೆಯುತ್ತಲಿಹರು ಕೊಂಡಾಡಿ ಬೇಡಿದರು ಕೊಡರೊಂದು ರುವ್ವಿಯನು ದಂಡಿಸಿ ಕೇಳುವರಿಗೆ ಧನವ ಕೊಡುತಿಹರು || ಕಳ್ಳರೊಳು ಅತಿಸ್ನೇಹ ಸುಳ್ಳರೊಳು ಸೋಲುವರು ಒಳ್ಳೆಯವರೊಡನೆ ವಂಚನೆಯ ಮಾಡುವರು ಇಲ್ಲದ ಅನಾಥರಿಗೆ ಇಷ್ಟೊಂದನಿಕ್ಕರು ಬಲ್ಲಿದಗೆ ಬಾಯಸವಿಯನುಣಿಸುವರು || ಮಾಡಿದುಪಕಾರವನು ಮರೆತುಕೊಂಬರು ಮತ್ತೆ ಕೂಡಲೇ ಕಾದುವರು ಕಪಟತ್ವದಿಂದ ರೂಢಿಯೊಳಗೆ ನಮ್ಮ ಪುರಂದರವಿಠಲನ್ನ ಪಾಡಿಪೊಗಳುವರಿಗಿನ್ನಾರ ಭಯವಿಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು