ಕರುಣಿಸಿ ಕೇಳೊ ಕಂದನ ಮಾತನು

ಕರುಣಿಸಿ ಕೇಳೊ ಕಂದನ ಮಾತನು

(ರಾಗ ಆನಂದಭೈರವಿ ಅಟತಾಳ ) ಕರುಣಿಸಿ ಕೇಳೊ ಕಂದನ ಮಾತನು ||ಪ|| ಗರುಡವಾಹನನೆ ಗಂಗೆಯ ಪೆತ್ತ ಶ್ರೀ ಹರಿಯೆ ||ಅ|| ಇತ್ತ ಬಾರೆಂಬರಿಲ್ಲ , ಯಾರು ಕೇಳುವರಿಲ್ಲ ಹತ್ತಿರ ಕುಳ್ಳಿರಿಸಿ ಆದರಿಪರಿಲ್ಲ ತತ್ತರಗೊಳುತೇನೆ ತಾವರೆಲೆನೀರಂತೆ ಚಿತ್ತ ಭ್ರಮಿಸಿ ಕಣ್ಣು ಕತ್ತಲಾಯಿತು ಹರಿಯೆ || ಇಂದುಂಬಶನವಿಲ್ಲ , ಇರವ ಕೇಳುವರಿಲ್ಲ ಒಂದು ಸುತ್ತಿಗೆ ತುಂಡು ಅರಿವೆ ಇಲ್ಲ ಬೆಂದೊಡಲಿಗೆ ಒಬ್ಬರಯ್ಯೊ ಎಂಬುವರಿಲ್ಲ ಬಿಂದುಮಾತ್ರದಿ ಸುಖವ ನಾ ಕಾಣೆ ಹರಿಯೆ || ಎಲ್ಲಿದ್ದರೆನಗೊಂದು ನೆಲೆಯಿಲ್ಲ ಶ್ರೀಹರಿ ಅಲ್ಲವ ತಿಂದಿಲಿಯಂತೆ ಬಲಲುವೆನೆ ಫುಲ್ಲಲೋಚನ ಪೂರ್ಣದಯದಿ ಸಲಹೊ ಎನ್ನ ಸಲ್ಲದ ನಾಣ್ಯವ ಮಾಡಿಬಿಡುವರೆ ಹರಿಯೆ || ನಖಕೇಶಪರಿಯಂತ ನಾನಾಭವದಿ ನೊಂದೆ ಸುಖವ ಕಾಣೆನು ಬಿಂದುಮಾತ್ರದಲಿ ಮುಖವರಿಯದ ರಾಜ್ಯದೊಳಗೆ ಎನ್ನನು ಬಿಟ್ಟು ಬಕನಂತೆ ಮಾಳ್ಪುದುಚಿತವೆ ಶ್ರೀಹರಿಯೆ || ಇಷ್ಟು ದಿವಸ ನಿನ್ನ ನೆನೆಯದ ಕಾರಣ ಕಷ್ಟಪಟ್ಟೆನು ಸ್ವಾಮಿ ಕಾಯೊ ಎನ್ನ ಮುಟ್ಟಿ ಭಜಿಸಲಿಲ್ಲ ಮುರವೈರಿ ನೀ ದಯ- ವಿಟ್ಟು ಸಲಹೊ ಶ್ರೀಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು