ಕಂಡೆ ಪಂಢರಿರಾಯನ
(ರಾಗ - ನಾದನಾಮಕ್ರಿಯೆ (ಮಾಂಡ್ ) ಆದಿತಾಳ (ಕಹರವಾ))
ಕಂಡೆ ಪಂಢರಿರಾಯನ , ತನ್ನನು
ಕೊಂಡಾಡುವರ ಪ್ರಿಯನ , ವಿಠಲನ ||ಪ||
ಸಮ ಚರಣ ಭುಜನ ನಿಗಮಾ-
ಗಮತತಿಗೆ ಗೋಚರನ
ಅಮಿತ ಪರಾಕ್ರಮನ ರುಕ್ಮಿಣಿ-
ರಮಣ ಸುಲಕ್ಷಣನ ವಿಠ್ಠಲನ ||೧||
ಕಾಮಿತಾರ್ಥಪ್ರದನ ಸಿರಿತುಲಸಿ
ದಾಮ ವಿಭೂಷಣನ
ಸಾಮಜ ಪತಿಪಾಲನ ತ್ರೈಜಗ-
ತ್ಸ್ವಾಮಿ ಚಿತ್ಸುಖಮಯನ ವಿಠ್ಠಲನ ||೨||
ಗೋಕುಲಪೋಷಕನ ಮುನಿಪುಂಡ-
ರೀಕಗೊಲಿದು ಬಂದನ
ಲೋಕವಿಲಕ್ಷಣನ ಶರಣರ
ಶೋಕವಿನಾಶನನ ವಿಠ್ಠಲನ ||೩||
ಚಂದ್ರಭಾಗವಾಸನ ವಿಧಿ-ವಿಹ-
ಗೇಂದ್ರ ಮುಖಾರ್ಚಿತನ
ಇಂದ್ರೋತ್ಪಲನಿಭನ ಗುಣಗಣ
ಸಾಂದ್ರ ಸುರೋತ್ತಮನ ವಿಠ್ಠಲನ ||೪||
ಶ್ವೇತವಾಹನ ಸಖನ ಸತಿಗೆ ಪಾರಿ-
ಜಾತವ ತಂದಿತ್ತವನ
ವೀತಶೋಕ ಭಯನ ಶ್ರೀ ಜಗ-
ನ್ನಾಥವಿಠ್ಠಲರಾಯನ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments