ಓಡಿ ಬಾರಯ್ಯ

ಓಡಿ ಬಾರಯ್ಯ

(ರಾಗ ಭೈರವಿ ಆದಿ ತಾಳ) ಓಡಿ ಬಾರಯ್ಯ ವೈಕುಂಠಪತಿ, ನಿನ್ನ ನೋಡುವೆ ಮನದಣಿಯೆ ||ಪ|| ಕಾಡಬೇಡವೋ ಕರುಣಾಕರ ,ನಿನ್ನ ಬೇಡಿಕೊಂಬೆನೊ ರಂಗಯ್ಯ ಬೇಗ ||ಅ.ಪ|| ಕೆಂದಾವರೆ ಪೋಲ್ವ ಪಾದಗಳಿಂದ , ರಂಗ ಧಿಂ ಧಿಮಿ ಧಿಮಿಕೆಂದು ಕುಣಿಯುತಲಿ ಅಂದುಗೆ ಕಿರುಗೆಜ್ಜೆ ನಲಿದಾಡುತ ಬಾರೋ, ಅರ- ವಿಂದ ನಯನ ಗೋವಿಂದ ನೀ ಬಾರೋ || ಎಣ್ಣೋರಿಗತಿರಸ ದಧಿ ಘೃತವೋ, ರಂಗ ಎನ್ನಯ್ಯ ನಿನಗೆ ಕೊಡುವ ಬಾರೋ ಚಿಣ್ಣರ ಒಡನಾಟ ಸಾಕೋ ಬಿಡೋ , ಈಗ ಬೆಣ್ಣೆಯ ಮೆಲುವುದು ಬೇಡವೋ ಕಂದ || ತುರುಬಿನ ಮೇಲೆ ನಲಿಯುತಲಿರುತಿಹ ಮರುಗಮಲ್ಲಿಗೆ ಜಾಜಿ ತುಲಸಿಯ ದಂಡೆ ಕರದಲ್ಲಿ ಪಿಡಿದಿಹೆ ಮುತ್ತಿನ ಚೆಂಡು ಸರಸದಿಂದಲಿ ನೀ ನಲಿದಾಡುತ ಬಾರೋ || ಕೋಟಿ ಸೂರ್ಯ ಪ್ರಕಾಶದಂತೆ ಕಿ- ರೀಟ ಕುಂಡಲ ಬಾವುಲಿ ಹೊಳೆಯೆ ಲ- ಲಾಟ ಕಸ್ತೂರಿ ತಿಲಕ ಇಡುವೆ , ರಂಗ ಕೂಟ ಗೋಪಾಲರ ಆಟ ಸಾಕೋ ಈಗ || ಮಂಗಳಾತ್ಮಕ ಮೋಹನಕಾಯ, ರಂಗ ಸಂಗೀತಲೋಲ ಸದ್ಗುಣ ಶೀಲ ಅಂಗನೆಯರಿಗೆಲ್ಲ ಅತಿ ಪ್ರಿಯನಾದ, ಶುಭ ಮಂಗಳ ಮೂರುತಿ ಪುರಂದರ ವಿಠಲ||
ದಾಸ ಸಾಹಿತ್ಯ ಪ್ರಕಾರ
ಬರೆದವರು