Skip to main content

ಒಲ್ಲನೋ ಹರಿ ಕೊಳ್ಳನೋ

( ರಾಗ ಕಲ್ಯಾಣಿ ಛಾಪು ತಾಳ)

ಒಲ್ಲನೋ ಹರಿ ಕೊಳ್ಳನೋ
ಎಲ್ಲ ಸಾಧನವಿದ್ದು ತುಳಸಿ ಇಲ್ಲದ ಪೂಜೆ ||

ಸಿಂಧು ಶತಕೋಟಿ ಗಂಗೋದಕವಿದ್ದು
ಗಂಧ ಸುಪರಿಮಳ ವಸ್ತ್ರವಿದ್ದು
ಚಂದುಳ್ಳ ಆಭರಣ ಧೂಪದೀಪಗಳಿದ್ದು
ಬೃಂದಾವನ ಶ್ರೀ ತುಳಸಿ ಇಲ್ಲದ ಪೂಜೆ ||

ದಧಿಕ್ಷೀರ ಮೊದಲಾದ ಅಭಿಷೇಕಗಳಿದ್ದು
ಮಧುಪರ್ಕ ಪಂಚೋಪಚಾರವಿದ್ದು
ಮುದದಿಂದ ಮುದ್ದು ಶ್ರೀ ಕೃಷ್ಣನ ಪೂಜೆಗೆ
ಸದಮಲಳಾದ ಶ್ರೀ ತುಳಸಿ ಇಲ್ಲದ ಪೂಜೆ ||

ಮಂತ್ರ ಮಹಾಮಂತ್ರ ಪುರುಷಸೂಕ್ತಗಳಿದ್ದು
ತಂತು ತಪ್ಪದೆ ತಂತ್ರಸಾರವಿದ್ದು
ಸಂತತ ಸುಖಸಂಪೂರ್ಣನ ಪೂಜೆಗ-
ತ್ಯಂತ ಪ್ರಿಯಳಾದ ತುಳಸಿ ಇಲ್ಲದ ಪೂಜೆ ||

ಕಮಲ ಮಲ್ಲಿಗೆ ಜಾಜಿ ಸಂಪಿಗೆ ಕೇದಿಗೆ
ವಿಮಲ ಘಂಟೆ ಪಂಚವಾದ್ಯಗಳಿದ್ದು
ಅಮಲ ಪಂಚಪಕ್ಷ್ಯ ಪರಮಾನ್ನಗಳಿದ್ದು
ಕಮಲನಾಭನು ಶ್ರೀ ತುಳಸಿ ಇಲ್ಲದ ಪೂಜೆ ||

ಪೂಜೆಯ ಮಾಡದೆ ತುಳಸಿ ಮಂಜರಿಯಿಂದ
ಮೂಜಗದೊಡೆಯ ಮುರಾರಿಯನು
ರಾಜಾಧಿರಾಜನೆಂಬ ಮಂತ್ರ ಪುಷ್ಪಗಳಿಂದ
ಪೂಜಿಸಿದರು ಒಲ್ಲ ಪುರಂದರವಿಠಲನು ||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: