ಏಳೇಳು ಶರಧಿಯು ಏಕವಾಗಿದೆ ಕಂಡ್ಯ

ಏಳೇಳು ಶರಧಿಯು ಏಕವಾಗಿದೆ ಕಂಡ್ಯ

ರಾಗ ಸೌರಾಷ್ಟ್ರ/ಅಟ್ಟ ತಾಳ ಏಳೇಳು ಶರಧಿಯು ಏಕವಾಗಿದೆ ಕಂಡ್ಯ ಹ್ಯಾಗೆ ಬಂದೆ ಹೇಳೊ ಕೋತಿ || ಪಲ್ಲವಿ || ಏಳು ಶರಧಿಯು ಎನಗೆ ಏಳು ಕಾಲುವೆಯು ತೂಳಿ ಲಂಘಿಸಿ ಬಂದೆ ಭೂತ || ಅನು ಪಲ್ಲವಿ || ಏಳು ಸಮುದ್ರದೊಳಿರುವ ಮಕರಿ ಮತ್ಸ್ಯ ಹ್ಯಾಗೆ ಬಿಟ್ಟರು ಹೇಳೊ ಕೋತಿ ಏಳು ಸಮುದ್ರದ ಮಕರಿ ಮತ್ಸ್ಯದ ಕೂಡೆ ಮಾತಾಡಿ ಬಂದೆನೊ ಭೂತ || ೧ || ಲಂಕಾದ್ವಾರದೊಳೊಬ್ಬ ಲಂಕಿಣಿ ಇರುವಳು ಹ್ಯಾಗೆ ಬಿಟ್ಟಳು ಹೇಳೊ ಕೋತಿ ಲಂಕಿಣಿಯನು ಕೊಂದು ಶಂಕೆಯಿಲ್ಲದೆ ನಾನು ಬಿಂಕದಿಂದಲಿ ಬಂದೆ ಭೂತ || ೨ || ಕೊಂಬೆ ಕೊಂಬೆಗೆ ಕೋಟಿ ಮಂದಿ ರಾಕ್ಷಸರಿರೆ ಹ್ಯಾಗೆ ಬಿಟ್ಟರು ಹೇಳೊ ಕೋತಿ ಕೊಂಬೆ ಕೊಂಬೆಗೆ ಕೋಟಿ ಮಂದಿ ರಾಕ್ಷಸರನ್ನು ಕೊಂದ್‍ಹಾಕಿ ಬಂದೆನೊ ಭೂತ || ೩ || ಯಾವೂರೊ ಎಲೊ ನೀನು ಯಾವ ಭೂಮಿಯೊ ನಿಂದು ಯಾಕೆ ಬಂದೆ ಹೇಳೊ ಕೋತಿ ಯಾವ ವನದೊಳಗೆ ಜಾನಕಿದೇವಿ ಇದ್ದಳೊ ಅವಳ ನೋಡಬಂದೆ ಭೂತ || ೪ || ದಕ್ಷಿಣಪುರಿ ಲಂಕಾ ದಾನವರಿಗಲ್ಲದೆ ತ್ರಕ್ಷಾದ್ಯರಿಗಳವಲ್ಲ ಕೋತಿ ಪಕ್ಷಿಧ್ವಜ ರಾಮನ ಅಪ್ಪಣೆ ಎನಗಿಲ್ಲ ಈ ಕ್ಷಣದಿ ತಪ್ಪಿಸಿಕೊಂಡೆ ಭೂತ || ೫ || ದೂತನಾಗಿಹೆ ಎನ್ನ ಕೈಯೊಳು ಸಿಕ್ಕಿಹೆ ಕೋಪವಿನ್ಯಾತಕೊ ಕೋತಿ ನಾ ತಾಳಿಕೊಂಡಿಹೆನೊ ಈ ಕ್ಷಣದಿ ಲಂಕೆ ನಿರ್ಧೂಮವನು ಮಾಳ್ಪೆ ಭೂತ || ೬ || ನಿಮ್ಮಂಥ ದಾಸರು ನಿಮ್ಮರಸನ ಬಳಿ ಎಷ್ಟುಮಂದಿಯಿದ್ದಾರೊ ಕೋತಿ ನನ್ನಂಥ ದಾಸರು ನಿನ್ನಂಥ ಹೇಡಿಗಳು ಕೋಟ್ಯಾನುಕೋಟಿಯೊ ಭೂತ || ೭ || ಎಲ್ಲಿಂದ ನೀ ಬಂದೆ ಏತಕೆಲ್ಲರ ಕೊಂದೆ ಯಾವರಸಿನ ಭಂಟ ಕೋತಿ ಚೆಲ್ವಯೋಧ್ಯಾಪುರದರಸು ಜಾನಕಿಪತಿ ರಾಮಚಂದ್ರನ ಭಂಟ ಭೂತ || ೮ || ಸಿರಿ ರಾಮಚಂದ್ರನು ನಿನ್ನರಸನಾದರೆ ಆತ ಮುನ್ನಾರು ಹೇಳೊ ಕೋತಿ ಹಿರಣ್ಯಕನನು ಸೀಳಿ ಪ್ರಹ್ಲಾದಗೊಲಿದ ಶ್ರೀ ಪುರಂದರವಿಠಲನೊ ಭೂತ || ೯ || ~~~ * ~~~ [ಇದು ಹನುಮಂತ ಮತ್ತು ರಾವಣ ಇವರ ನಡುವೆ ನಡೆದ ಸಂವಾದ. ರಾವಣನು ಹನುಮಂತನನ್ನು ಕೋತಿಯೆಂದು ಕರೆದರೆ ಹನುಮಂತನು ರಾವಣನನ್ನು ಭೂತನೆಂದು ಕರೆಯುತ್ತಾನೆ. ಇದರಲ್ಲಿ ಹನುಮಂತನ ಸಾಹಸದ ಸ್ವಾರಸ್ಯವಾದ ವರ್ಣನೆಯಿದೆ.] ಏಳೇಳು ಶರಧಿಯು ಏಕವಾಗಿದೆ - ಸಮುದ್ರಮಧ್ಯದಲ್ಲಿರುವ ಲಂಕಾಪುರವು ದುರ್ಗಮವಾದುದೆಂದೂ, ಅಜೇಯವಾದುದೆಂದೂ ಪ್ರತೀತಿಯಿದ್ದಿತು. ಹನುಮಂತನು ಅಲ್ಲಿಗೆ ಬಂದುದನ್ನು ತಿಳಿದು ಲಂಕಾಧಿಪತಿಯಾದ ರಾವಣನಿಗೇ ಆಶ್ಚರ್ಯವಾಯಿತು. ಮಕರಿ ಮತ್ಸ್ಯ - ಮೊಸಳೆ ಮೀನು. ತ್ರಕ್ಷಾದ್ಯರಿಗಳವಲ್ಲ - ತ್ರಕ್ಷನೆಂದರೆ ಮುಕ್ಕಣ್ಣ, ಶಿವ; ಶಿವನೇ ಮೊದಲಾದ ದೇವತೆಗಳು ಕೂಡ ದಾನವರ ಬೀಡಾದ ಲಂಕೆಗೆ ಬರಲಾರರು. ಪಕ್ಷಿಧ್ವಜ - ಗರುಡಧ್ವಜ.
ದಾಸ ಸಾಹಿತ್ಯ ಪ್ರಕಾರ
ಬರೆದವರು