Skip to main content

ಏಕೆ ಚಿಂತಿಸುತಿದ್ದಿ ಕೋತಿ ಮನವೆ

( ರಾಗ ಭೈರವಿ. ಝಂಪೆ ತಾಳ)

ಏಕೆ ಚಿಂತಿಸುತಿದ್ದಿ ಕೋತಿ ಮನವೆ ||ಪ||
ಲೋಕನಾಥನ ನೆನೆದು ಸುಖಿಯಾಗು ಮನವೆ ||ಅ||

ಹುಟ್ಟುವಾಗಾಪತ್ತಿಗಾರು ಚಿಂತಿಸಿದವರು
ಕಟ್ಟಕಡೆಯಲಿ ಲಯಕೆ ಯಾರ ಚಿಂತೆ
ನಟ್ಟನಡುವಿನ ಬಾಳಿಗೇಕೆ ಚಿಂತಿಸುತಿರುವೆ
ಹುಟ್ಟಿದವರಿಗೆ ಮೂರು ಬಟ್ಟಿಲ್ಲವೆ ಮರುಳೆ ||

ನವಿಲಿಂಗೆ ಚಿತ್ರಪತ್ರವನಾರು ಬರೆದವರು
ಪವಳದಾ ಲತೆಗೆ ಕೆಂಪಿಟ್ಟವರು ಯಾರು
ಸವಿಮಾತಿನರಗಿಣಿಗೆ ಹಸಿರು ಬಳಿದವರಾರು
ಅವ ಮಾಡಿದವ ನಮ್ಮ ಮರೆತಿಹನೆ ಮರುಳೆ ||

ಬಸಿರೊಳಗೆ ಶಿಶುವನು ಅದಾರು ಸಲಹಿದವರು
ವಸುಧೆಯನು ಬಸಿರೊಳಿಟ್ಟಿರುವರಾರು
ಹಸಗೆಡದೆ ನಮ್ಮ ಶ್ರೀ ಪುರಂದರ ವಿಟ್ಠಲನ
ಬಿಸಜ ಪಾದವ ನಂಬಿ ಸುಖಿಯಾಗು ಮರುಳೆ ||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: