ಎಲ್ಲಾನು ಬಲ್ಲೆನೆಂಬುವಿರಲ್ಲ

ಎಲ್ಲಾನು ಬಲ್ಲೆನೆಂಬುವಿರಲ್ಲ

( ರಾಗ ಮಧ್ಯಮಾವತಿ. ಆದಿ ತಾಳ)

ಎಲ್ಲಾನು ಬಲ್ಲೆನೆಂಬುವಿರಲ್ಲ

ಅವಗುಣ ಬಿಡಲಿಲ್ಲ ||ಪ||

ಸೊಲ್ಲಿಗೆ ಶರಣರ ಕಥೆಗಳ ಪೇಳುತ

ಅಲ್ಲದ ನುಡಿಯನು ನುಡಿಯುವಿರಲ್ಲ ||ಅ||

 

ಕಾವಿಯನುಟ್ಟು ತಿರುಗುವಿರಲ್ಲ, ಕಾಮವ ಬಿಡಲಿಲ್ಲ

ನೇಮ ನಿಷ್ಠೆಗಳ ಮಾಡುವಿರಲ್ಲ, ತಾಮಸ ಬಿಡಲಿಲ್ಲ

ತಾವೊಂದರಿಯದೆ ಪರರನು ತಿಳಿಯದೆ, ಶ್ವಾನನ ಕುಳಿಯಲಿ ಬೀಳುವಿರಲ್ಲ ||

 

ಗುರುಗಳ ಸೇವೆ ಮಾಡಿದರಿಲ್ಲ , ಗುರುತಾಗಲಿಲ್ಲ

ಪರಿಪರಿ ದೇಶವ ತಿರುಗಿದರಿಲ್ಲ, ಪೊರೆಯುವರಿನ್ನಿಲ್ಲ

ಅರಿವೊಂದರಿಯದೆ ಆಗಮ ತಿಳಿಯದೆ, ನರಕಕೂಪದಲಿ ಬೀಳುವಿರಲ್ಲ ||

 

ಬ್ರಹ್ಮ ಜ್ಞಾನಿಗಳು ಎನಿಸುವಿರಲ್ಲ, ಹಮ್ಮು ಬಿಡಲಿಲ್ಲ

ಸುಮ್ಮನೆ ಯಾಗವ ಮಾಡುವಿರಲ್ಲ, ಸುಳ್ಳನು ಬಿಡಲಿಲ್ಲ

ಗಮ್ಮನೆ ಪುರಂದರವಿಠಲನ ಪಾದಕೆ, ಹೆಮ್ಮೆ ಬಿಟ್ಟು ನೀವೆರಗಲೆ ಇಲ್ಲ ||

ದಾಸ ಸಾಹಿತ್ಯ ಪ್ರಕಾರ
ಬರೆದವರು