Skip to main content

ಎಂಥಾ ಪುಣ್ಯವೆ ಗೋಪಿ

(ರಾಗ ಸಾವೇರಿ. ತ್ರಿಪುಟ ತಾಳ)

ಎಂಥಾ ಪುಣ್ಯವೆ ಗೋಪಿ ,ಎಂಥಾ ಭಾಗ್ಯವೆ ಯಶೋದೆ
ಇಂಥಾ ಮಗನ ಕಾಣೆನೆ ||ಪ||
ಚಿಂತಿಸಿದರು ದೊರಕ ಚೆಲುವ ರಾಜಗೋಪಾಲ
ಭ್ರಾಂತಿ ಮಾತುಗಳಲ್ಲವೆ, ಬಹು ನಿಜವೆ ||ಅ.ಪ||

ಸರಸಿಜನಾಭನ ಸುಮ್ಮನೆ ಕಂಡರೆ
ದುರಿತವೆಲ್ಲವು ಪೋಪುದೆ
ಸರಸದಿಂದಲಿ ಒಮ್ಮೆ ಸವಿ ಮಾತನಾಡಿದರೆ
ಹರುಷ ಕೈ ಕೂಡುವುದೆ, ಯಶೋದೆ ||

ಊರೊಳಗೆ ಇಲ್ಲಿ ನೆರೆ ಹೊರೆಯರಂಜಿಕೆ
ದೂರು ತುಂಬಿತಲ್ಲವೆ
ಅರಣ್ಯದಲಿ ನಾವು ಆಡಿದಾಟದ ಸುಖ
ಆರಿಗಾದರು ಉಂಟೇನೆ ಒಂದೇನೆ ||

ನಿನ್ನ ಮಗನ ಕರೆಯೆ, ಎನ್ನ ಪ್ರಾಣದ ದೊರೆಯೆ
ಘನ್ನನು ಪರಬ್ರಹ್ಮನೆ
ಚೆನ್ನ ಶ್ರೀ ಪುರಂದರ ವಿಟ್ಠಲರಾಯನ
ನಿನ್ನಾಣೆ ಬಿಡಲಾರೆನೆ ಕೇಳೇ ಯಶೋದೆ ||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: