ಉದರವೈರಾಗ್ಯವಿದು

ಉದರವೈರಾಗ್ಯವಿದು

( ರಾಗ ನಾದನಾಮಕ್ರಿಯೆ ಆದಿತಾಳ) ಉದರವೈರಾಗ್ಯವಿದು, ನಮ್ಮ ಪದುಮನಾಭನಲ್ಲಿ ಲೇಶ ಭಕುತಿಯಿಲ್ಲ || ಉದಯಕಾಲದಲೆದ್ದು ಗದಗದ ನಡುಗುತ ನದಿಯಲಿ ಮಿಂದೆನೆಂದು ಹಿಗ್ಗುತಲಿ ಮದ ಮತ್ಸರ ಕ್ರೋಧ ಒಳಗೆ ತುಂಬಿಟ್ಟುಕೊಂಡು ಬದಿಯಲಿದ್ದವರಿಗಾಶ್ಚರ್ಯವ ತೋರುವುದೂ || ಕಂಚುಗಾರನ ಬಿಡಾರದಂದದಿ ಕಂಚು ಹಿತ್ತಾಳೆ ಪ್ರತಿಮೆಗಳ ನೆರಹಿ ಮಿಂಚಬೇಕೆಂದು ಬಲು ಜ್ಯೋತಿಗಳನು ಹಚ್ಚಿ ವಂಚನೆಯಿಂದಲಿ ಪೂಜೆಯ ಮಾಡುವುದು || ಕರದಲಿ ಜಪಮಣಿ ಬಾಯಲಿ ಮಂತ್ರವು ಅರಿವೆ ಮುಸುಕು ಮೋರೆಗೆ ಹಾಕಿ ಪರಸತಿಯರ ಗುಣ ಮನದಲಿ ಸ್ಮರಿಸುತ ಪರಮ ವೈರಾಗ್ಯಶಾಲಿಯೆಂದೆನಿಸುವುದು || ಬೂಟಕತನದಲಿ ಬಹಳ ಭಕುತಿ ಮಾಡಿ ದಿಟನೀತ ಸರಿಯಾರಿಲ್ಲೆನಿಸಿ ನಾಟಕ ಸ್ತ್ರೀಯಂತೆ ಬಯಲು ಡಂಭವ ತೋರಿ ಊಟದ ಮಾರ್ಗದ ಜ್ಞಾನವಿದಲ್ಲದೆ || ನಾನು ಎಂಬುದ ಬಿಟ್ಟು ಜ್ಞಾನಿಗಳೊಡನಾಡಿ ಏನಾದರು ಹರಿ ಪ್ರೇರಣೆಯೆಂದು ಧ್ಯಾನಿಸಿ ಮೌನದಿ ಪುರಂದರವಿಠಲನ ಕಾಣದೆ ಮಾಡಿದ ಕಾರ್ಯಗಳೆಲ್ಲವು ||
ದಾಸ ಸಾಹಿತ್ಯ ಪ್ರಕಾರ
ಬರೆದವರು