ಉಣಲೊಲ್ಲೆ ಯಾಕೋ

ಉಣಲೊಲ್ಲೆ ಯಾಕೋ

(ರಾಗ ಯದುಕುಲಕಾಂಭೋಜಿ. ಝಂಪೆ ತಾಳ.) ಉಣಲೊಲ್ಲೆ ಯಾಕೋ ಕಂದ , ಆವ ಗೋವಳತಿಯರ ಕಣ್ಣು ದೃಷ್ಟಿ ತಾಗಿತಯ್ಯ ||ಪ|| ಅನುದಿನ ನಮ್ಮೆಲ್ಲರ ಅಗಲಬಾರದು ಎಂದು ಮನಸೋತು ಗೋಪಿಯರು ಮೆಚ್ಚಿ ಮದ್ದಿಕ್ಕಿದರೆ ||ಅ. ಪ|| ಅಸುರೆ ಪೂತನಿಯಿತ್ತ ವಿಷದ ಮೊಲೆಗಳನುಂಡು ಬಸಿರೊಳಗೆ ಬಲಿತು ಕಲ್ಮಶ ನೆಲೆಸಿತೆ ಪೊಸ ಜವ್ವನದ ನಾರಿಯರು ಮುದ್ದಿಸಲವರ ಅಧ- ರಸುಧೆ ನಿನಗೆ ಹಸಿವೆ ಮಾಣಿಸಿತೆ ಕಂದ ಹೊದ್ದಿ ಗೊಲ್ಲರ ಮನೆಯಲ್ಲಿದ್ದಷ್ಟು ಬೆಣ್ಣೆಯನು ಕದ್ದು ಮೆದ್ದುದಕೆ ಹೊಟ್ಟೆ ತುಂಬಿತೆ ಅಬ್ಧಿಯೊಳಗಿದ್ದಮೃತ ಅಸುರರಿಗೆ ವಂಚಿಸಿ ಮೆದ್ದಿಸಲು ಸುರರಿಗೆ ಹಿತವಾಯಿತೆ ಕಂದ ತುರುಗಾಯ್ವ ಗೊಲ್ಲರು ಕಲೆಸಿ ಅನ್ನವ ಕೊಡಲು ಹರುಷದಿಂದುಂಬೋದತಿ ಪ್ರಿಯವಾಯಿತೆ ಪರಮ ಭಕ್ತರು ನಿನ್ನ ಪೂಜಿಸುತ ಅರ್ಪಿಸಿದ ಪರಿ ಪರಿಯ ನೈವೇದ್ಯ ಹಿತವಾಯಿತೆ ಕಂದ ಸಣ್ಣಕ್ಕಿಯೋಗರವು ಸೊಗಸಾದ ಕೆನೆ ಮೊಸರು ಬಣ್ಣಿಸುತ ನಾನುಣಿಸೆ ಒಲ್ಲದಾಯಿತೆ ಚಿಣ್ಣ ನಿನ್ನನು ತಮ್ಮ ತೊಡೆಯ ಮೇಲೆತ್ತಿಕೊಂಡಾ ಹೆಣ್ಣುಗಳು ಉಣಿಸಿದರೆ ಹೊಟ್ಟೆ ತುಂಬುವದೆ ವರ ಮಹಾ ಋಷಿಗಳು ಯಾಚಿಸುತ ತಂದಿತ್ತ ಪರಿಪರಿಯ ನೈವೇದ್ಯ ಪ್ರಿಯವಾಯಿತೆ ವರ ಪುರಂದರ ವಿಟ್ಠಲರಾಯನೇ ನೀ ಪೇಳೊ ನಿರತ ಸಂತುಷ್ಟನೆಂಬುದು ನಿಜವಾಯಿತೇ ಕಂದ
ದಾಸ ಸಾಹಿತ್ಯ ಪ್ರಕಾರ
ಬರೆದವರು