ಈ ಶರೀರದ ಭ್ರಾಂತಿ ಇನ್ನೇಕೆ

ಈ ಶರೀರದ ಭ್ರಾಂತಿ ಇನ್ನೇಕೆ

(ರಾಗ ತೋಡಿ ತ್ರಿಪುಟ ತಾಳ) ಈ ಶರೀರದ ಭ್ರಾಂತಿ ಇನ್ನೇಕೆ ಮನವೆ ||ಪ|| ವಾಸುದೇವನ ನೆನೆದು ಸುಖಿಯಾಗೊ ಮನುಜ ||ಅ|| ದಂತಗಳು ಸಡಲಿದವು ಧಾತುಗಳು ಕುಂದಿದವು ಕಾಂತೆಯರು ಜರೆದು ಓಕರಿಸುವರೊ ಚಿಂತೆಯೇತಕೆ ಬಯಲಾದ ದೇಹಕ್ಕೆ ಇಂತೆಂದು ತಿಳಿದು ಶ್ರೀಕಾಂತನ ನೆನೆ ಮನವೆ || ಕಾಲು ಜವಗುಂದಿದವು ಕಣ್ಣುಗಳು ಇಂಗಿದವು ಮೇಲೆ ಯೌವನ ಪೋಗಿ ಜರೆಯು ಬಂತು ಕಾಲಕರ್ಮಂಗಳು ಸಂಧಿಸಿದ ಸಮಯದಿ ಬಾಲತನದ ಆಸೆಯಿನ್ನೇಕೆ ಮನವೆ || ನೀರ ಬೊಬ್ಬುಳಿಯಂತೆ ಸ್ಥಿರವೆಂದು ಈ ದೇಹ ಧಾರಿಣೀ ಧನ ಸ್ತ್ರೀಗೆ ಮರುಳಾಗಬೇಡ ನೀರಜನಾಭ ಶ್ರೀಪುರಂದರವಿಠಲನ್ನ ಸೇರಿ ಸುಖಿಸದೆ ಸುಮ್ಮನಿರಬೇಡ ಮನವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು