ಈತ ರಂಗನಾದ ಹರಿಯು ಆತ ಲಿಂಗನಾದ ಹರನು

ಈತ ರಂಗನಾದ ಹರಿಯು ಆತ ಲಿಂಗನಾದ ಹರನು

ಈತ ರಂಗನಾದ ಹರಿಯು
ಆತ ಲಿಂಗನಾದ ಹರನು ||ಪ||

ಗಿರಿಜಾಪತಿಯಾದನಾತ
ಗಿರಿಯ ಬೆನ್ನಲಿ ತಾಳಿದನೀತ
ಸ್ಮರನ ಮಡುಹಿದಾತನಾತ
ಸ್ಮರನ ಜನಕನಾದನೀತ ||೧||

ಶೇಷಭೂಷಣನಾದನಾತ
ಶೇಷಶಾಯಿಯಾದನೀತ
ಪೋಷಿಪ ಭಕ್ತರನಾತ
ದೋಷದೂರನಾದನೀತ ||೨||


ಕಂಗಳ ಮೂರುಳ್ಳವನಾತ
ಮಂಗಳ ದೇವೇಶನೀತ
ತುಂಗ ಹೆಳವನಕಟ್ಟೆ
ರಂಗನೀತ ಲಿಂಗನಾತ    ||೩||

-- ಹೆಳವನಕಟ್ಟೆ ಗಿರಿಯಮ್ಮ

ದಾಸ ಸಾಹಿತ್ಯ ಪ್ರಕಾರ