ಇಷ್ಟು ಪಾಪವ ಮಾಡಿದ್ದೆ ಸಾಕು

ಇಷ್ಟು ಪಾಪವ ಮಾಡಿದ್ದೆ ಸಾಕು

(ರಾಗ ಕಾಂಭೋಜ ಝಂಪೆ ತಾಳ ) ಇಷ್ಟು ಪಾಪವ ಮಾಡಿದ್ದೆ ಸಾಕು ||ಪ|| ಸೃಷ್ಟೀಶನೆ ಎನ್ನ ಉದ್ಧರಿಸಬೇಕು ||ಅ|| ಒಡಲ ಕಿಚ್ಚಿಗೆ ಪರರ ಕಡುನೋಯಿಸಿದೆ ಕೊಡದೆ ಅನ್ಯರ ಋಣವನಪಹರಿಸಿದೆ ಮಡದಿಯ ನುಡಿ ಕೇಳಿ ಒಡಹುಟ್ಟಿದವರೊಡನೆ ಹಡೆದ ತಾಯಿಯ ಕೂಡೆ ಹಗೆ ಮಾಡಿದೆ || ಸ್ನಾನ ಸಂಧ್ಯಾದಿಗಳ ಮಾಡದಲೆ ಮೈಗೆಟ್ಟೆ ಜ್ಞಾನಮಾರ್ಗವನಂತು ಮೊದಲೆ ಬಿಟ್ಟೆ ಏನ ಹೇಳಲಿ ಪರರ ನಾರಿಗೆ ಮನಸಿಟ್ಟೆ ಶ್ವಾನಸೂಕರನಂತೆ ಹೊರೆದೆ ಹೊಟ್ಟೆ || ವ್ರತನೇಮ ಉಪವಾಸ ಒಂದು ದಿನ ಮಾಡಲಿಲ್ಲ ಅತಿಥಿಗಳಿಗನ್ನವನು ನೀಡಲಿಲ್ಲ ಶ್ರುತಿಶಾಸ್ತ್ರ ಪುರಾಣ ಕಥೆಗಳನು ಕೇಳಲಿಲ್ಲ ವೃಥವಾಗಿ ಬಹುಕಾಲ ಗತವಾಯಿತಲ್ಲ || ಶುದ್ಧವೈಷ್ಣವಕುಲದಲುದ್ಭವಿಸಿದೆ ನಾನು ಮಧ್ವಮತಸಿದ್ಧಾಂತಪದ್ಧತಿಗಳ ಬುದ್ಧಿಪೂರ್ವಕ ತಿಳಿದು ಕದ್ದುಂಡು ಕಾಯವನು ವೃದ್ಧಿಮಾಡಿದೆನಯ್ಯ ಉದ್ಧರಿಸು ಹರಿಯೆ || ತಂದೆತಾಯಿಯ ಸೇವೆಯೊಂದು ದಿನ ಮಾಡಲಿಲ್ಲ ಮಂದಭಾಗ್ಯಗೆ ಬವಣೆ ತಪ್ಪಲಿಲ್ಲ ಹಿಂದೆ ಮಾಡಿದ ದೋಷ ಒಂದುಳಿಯದರುಹಿದೆನೊ ತಂದೆ ಪುರಂದರವಿಠಲ ಬಂದೆನ್ನ ಸಲಹೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು