ಇನ್ನು ಪುಟ್ಟಿಸದಿರಯ್ಯ
(ರಾಗ ರೇಗುಪ್ತಿ ಝಂಪೆತಾಳ)
ಇನ್ನು ಪುಟ್ಟಿಸದಿರಯ್ಯ, ಪುಟ್ಟಿಸಿದಕೆ ಪಾಲಿಸಯ್ಯ
ನನ್ನ ದಯದಿ ತಾರಿಸಯ್ಯ ||ಪ||
ನಿನ್ನ ಪಾದಾಂಭುಜವ ನಂಬಿದೆನು ರಘುಪತಿಯೆ
ಬೆನ್ನುಬಿದ್ದೆನು ಭವಬಂಧನ ಬಿಡಿಸೊ ||ಅ||
ಅಮರೇಂದ್ರವಂದಿತನೆ ಅನಂತಮಹಿಮನೆ
ಕಮಲಸಖತೇಜಕರನೆ
ಅಮಿತಲೋಹಿತನೆ ನೀ ಕಾಮಿತವರದನೆ
ವಿಮಲ ವಿಭೀಷಣಗೊಲಿದ ದಯದಿಂದಲೆನ್ನ ||
ಅಜಮಿಳ ಅಂಬರೀಷ ಅಕ್ರೂರ ನಾರದಗೆ
ಗಜರಾಜ ಗಿರಿಜೇಶಗೆ
ಅಜಧ್ರುವ ಅರ್ಜುನಗೆ ನಿಜಭಕ್ರ ಪ್ರಹ್ಲಾದಗೆ
ದ್ವಿಜಗೆ ರುಕ್ಮಾಂಗದಗೆ ಒಲಿದ ದಯದಿಂದಲೆನ್ನ ||
ಎಂದೆಂದಿಗೆ ನಿನ್ನ ಪಾದವೆನಗೆ ನೆಲೆಯಾಯಿತು
ಅಂದು ನಿನ್ನ ಪಾದಭಜನೆ
ಎಂದಿಗೆ ನಿನ್ನ ಪಾದ ಪಿಡಿಸಿ ಸಲಹೋ ಸ್ವಾಮಿ
ಅಂದು ಅಂಜನೆಕಂದಗೊಲಿದ ದಯದಿಂದಲೆನ್ನ ||
ಅವರಂತೆ ನಾನಲ್ಲ ಅವರ ದಾಸರ ದಾಸ
ಸವರಿ ಬಿಸುಟೆನ್ನ ದೋಷ
ಪಾವನ್ನ ಮಾಡಯ್ಯ ಪುಂಡರೀಕವರದನೆ
ಅವಸರಕೆ ದ್ರೌಪದಿಗೆ ಒಲಿದ ದಯದಿಂದಲೆನ್ನ ||
ಅಂತರಂಗದುಬ್ಬಸವ ನಿನಗೆ ಉಸಿರುವೆ ನಾನು
ಸಂತಸದಿ ಗೌತಮನ ಸತಿ ಸಲಹಿದೆ
ಸಂತತ ನಿನ್ನ ಭಕ್ತರನು ಪಾಲಿಸುವ
ಕಂತುಪಿತ ನಮ್ಮ ಸಿರಿಪುರಂದರ ವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments