ಇನ್ನಾದರು ನಿನಗೆ ನೀನು ತಿಳಿಯದೆ ಇಂಥ

ಇನ್ನಾದರು ನಿನಗೆ ನೀನು ತಿಳಿಯದೆ ಇಂಥ

(ರಾಗ ಪುನ್ನಾಗವರಾಳಿ ಝಂಪೆ ತಾಳ) ಇನ್ನಾದರು ನಿನಗೆ ನೀನು ತಿಳಿಯದೆ ಇಂಥ ಅನ್ಯಾಯವುಂಟೆ ಪೇಳೊ ಆತ್ಮ ||ಪ|| ಚೆನ್ನಾಗಿ ಕಂಡು ತಿಳಿದು ಚರಿಸುವರೆ ತಿರುಗಿ ತಿರುಗಿ ಬಿನ್ನಾಣ ಬೇಡ ಕಂಡ್ಯ ಆತ್ಮ ||ಅ|| ಎಷ್ಟು ಜನ್ಮವ ಪಡೆದೆ ಎಷ್ಟು ಬಸಿರಲಿ ಬಂದೆ ಎಷ್ಟು ತನುವಾಗಿ ಬೆಳೆದೆ ಆತ್ಮ ಎಷ್ಟು ಮೊಲೆಪಾಲುಂಡೆ ಎಷ್ಟು ದೇಶದಲಿದ್ದೆ ಎಷ್ಟು ಸತಿಸುತರ ಪಡೆದೆ ಆತ್ಮ | ಎಷ್ಟು ಶಿಶುವೆಂದೆನಿಸಿಕೊಂಡು ಮೆರೆದೆ ಎಷ್ಟು ಬನ್ನವ ತಾಳಿದೆ ಆತ್ಮ ಎಷ್ಟು ಬಂಧುಗಳೊಡನೆ ಎಲ್ಲೆಲ್ಲಿ ಬಂದು ಬೆರೆದೆ ಎಷ್ಟು ಗುಣದವರ ನೋಡೊ ಆತ್ಮ || ಎಲುವುಗಳನು ಕಡೆದು ಎಂಭತ್ತನಾಲ್ಕು ಕೀಲುಗಳು ಬಲು ನರಂಗಳಲಿ ಬಿಗಿದು ಆತ್ಮ ನೆಲೆ ರಕ್ತ ಮಾಂಸದಲಿ ನೆರಹಿ ಚರ್ಮವ ತೊಡಿಸಿ ಬಲು ಬೊಂಬೆಯಾದೆಯಲ್ಲೊ ಆತ್ಮ | ಮಲಮೂತ್ರ ಪೂಜಿತದ ಮನೆಬಾ- ಗಿಲೊಂಭತ್ತು ಬಳಿಕ ಕೊಂಡಿಪ್ಪೆಯಲ್ಲೊ ಆತ್ಮ ಬಲವಂತನೆನಿಸುವರು ಪಂಚಭೂತಗಳಿಂದ ಬೆಲೆಗೆಯ್ವೆ ದೇಹ ಕಂಡ್ಯಾ ಆತ್ಮ || ಮೂವನೆರದ ಭಂಡಿ ಹೊಲನ್ಯಾರದೆಂಬುವುದು ಮೂರುಗುಣದವರ ನೋಡೊ ಆತ್ಮ ತಾವರದ ಅಷ್ಟ ಮದ ಜವಿಯಲಿ ಪೋಪುವುದು ಭಾವದವರ ನೋಡೊ ಆತ್ಮ | ಭಾವರದ ಷಡ್ವರ್ಗ ಘಾತಕ ಕೊಂಪೆಯಿದು ತಾವೆನಿಸಿಕೊಂಬುವುದಲ್ಲೋ ಆತ್ಮ ಭಾವಜನ ಕಲೆ ನೆಲೆಯ ಬಿಟ್ಟರು ಹದಿನಾರು ಮಂದಿ ನಾರಿಯಾರಿರರು ಕಂಡ್ಯಾ ಆತ್ಮ || ಆಡಿ ತಪ್ಪಲು ಬೇಡ , ನೋಡಿ ಕೊಡದಿರಬೇಡ ಬೇಡಿದರೆ ಕಾಡಬೇಡ ಆತ್ಮ ಚಾಡಿಚುಡಿತಗಳಾಡಿ ಸಲೆ ಪಂಥಗಳನಾಡಿ ಕೆಡುಕ ನೀನಾಗಬೇಡ ಆತ್ಮ | ಆಡಿ ಹಲವರ ಜರೆದು , ಹಗರಣಕೆ ಗುರಿಮಾಡಿ ಆಡಿ ಹಮ್ಮಿಸಬೇಡ ಆತ್ಮ ನೆಡಿಗಂಡದಿನನಾಗಿ ನಂಬಿದರೆ ಸಲಹನೇ ನರಕರುಹನಾಗಬೇಡ ಆತ್ಮ || ನೆಚ್ಚದಿರು ಈಯೊಡಲ, ನೆಚ್ಚದಿರು ಈ ದೋರ್ಬಲವ ನೆಚ್ಚದಿರು ಈ ಸಿರಿಯನು ಆತ್ಮ ಹೆಚದಿರು ಉಬ್ಬಿನಲಿ ಹೆಚ್ಚದಿರು ಕೊಬ್ಬಿನಲಿ ಹೆಚ್ಚದಿರು ಕ್ರೂರದಲಿ ಆತ್ಮ | ಕಚ್ಚದಿರು ಎಲ್ಲರಲಿ , ಕಚ್ಚದಿರು ಬಲ್ಲರಲಿ ಕಚ್ಚದಿರು ಶ್ವಾನನಂತೆ ಆತ್ಮ ಬೆಚ್ಚದಿರು ದೃಢದಲ್ಲಿ , ಬೆಚ್ಚದಿಂದ್ರಿಯಗಳಲಿ ಬೆಚ್ಚದಿರು ಚಿತ್ತದಲ್ಲಿ ಆತ್ಮ || ವೇದಶ್ರುತಿಗಳ ಕೇಳು , ಓದು ರಾಮಾಯಣವ ಭೇದಿಸು ಭಾಷಿತವನು ಆತ್ಮ ಆದಿಗುರುಹಿರಿಯರಲ್ಲಿ ಅಧಿಕಬುದ್ಧಿಯ ಕೊಡು ಆಗಮವ ತಿಳಿದು ಬಾಳು ಆತ್ಮ | ಕದ್ದ ಕಳ್ಳನ ಹಿಡಿವ ಕಪಟ ಕಾಮನ ಗೆಲಿವ ಕಾಯಕದ ಚಿಂತೆ ಮಾಡು ಆತ್ಮ ಕಾದ ಹಾಲಿನ ತೆರದಿ ಕಲ್ಮಷವ ಕಳೆದು ಉಪಕಾರಿ ಜೀವನಾಗೊ ಆತ್ಮ || ದೇಶಮೋಹ ಚಿಂತನೆಯ ವಶವೃತ್ತಿಯೊಳಗಾಗಿ ಅಸುರ ನೀನಾಗಬೇಡ ಆತ್ಮ ಶಶಿಮುಖಿಯರೆನಿಪ ಪರಸ್ತ್ರೀಯರಲಿ ಕಣ್ಣಿಟ್ಟು ಪಶುಪಕ್ಷಿ ಆಗಬೇಡ ಆತ್ಮ | ಪುಸಿಯ ಸಂಸಾರ ಸಂಭೋಗದತಿಶಯದ ಕೊಬ್ಬಿನಲಿ ನೀ ಸದಾ ದೀನನಾಗಬೇಡ ಆತ್ಮ ಹಸನಾದ ನರಜನ್ಮ ಹಲವು ಜನ್ಮದಿ ಜನಿಸಿ ದೆಸೆಗೆಟ್ಟು ತಿರುಗಬೇಡ ಆತ್ಮ || ಸತ್ಯವೆಂಬೊ ದೊಡ್ಡ ಸಾಮ್ರಾಜ್ಯಪದವಿಯಲಿ ನಿತ್ಯ ಓಲಗವ ಮಾಡೊ ಆತ್ಮ ಅತ್ಯಧಿಕ ಫಲವೀವ ಅನ್ನದಾನಗಳಲ್ಲಿ ಮೃತ್ಯು ಭಯವೆಲ್ಲ ನೂಕೊ ಆತ್ಮ | ಮುತ್ತು ಇಲ್ಲದ ರತ್ನ ಮೂರಂತರಂಗದಲಿ ಮೂವ್ವದೊಡೆಯನ ಪೂಜಿಸೋ ಆತ್ಮ ಕತ್ತಲೆಯ ಕಳೆಕಳೆದು ಘನಪಾಪಗಳನೆಲ್ಲನೊತ್ತಿ ನಿಜಬೆಳಕ ನೋಡೊ ಆತ್ಮ || ಕುಲಗೋತ್ರವೊಂದಾಗೊ ನೆಲಸೂತ್ರನೊಂದಾಗೊ ಸಲಹು ಗುಣಸಾಂದ್ರನಾಗೊ ಆತ್ಮ ಬಲುವೀರ ಶೂರನಾಗೊ ಭಾಗವತ ನೀನಾಗೊ ಪರಮಪುಣ್ಯಾತ್ಮನಾಗೊ ಆತ್ಮ | ಚೆಲುವ ಗುರು ಮಧ್ವಪತಿ ಶ್ರೀಲಕ್ಷ್ಮಿಕೃಪೆಯಿಂದ ಪಾವನದ ಶೀಲನಾಗೊ ಆತ್ಮ ಇಳೆಯೊಳಗೆ ಪುರಂದರವಿಠಲನಂಘ್ರಿಗಳ ಭಜಿಸಿ ಎಡೆಬಿಡದೆ ದಾಸನಾಗೊ ಆತ್ಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು