ಇದೇ ನಮ್ಮ ವೃತ್ತಿ ಸದ್ಗುರು ಭಾವಭಕ್ತಿ
( ಪಹಾಡಿ ರಾಗ ಕೇರವಾ ತಾಳ)
ಇದೇ ನಮ್ಮ ವೃತ್ತಿ ಸದ್ಗುರು ಭಾವಭಕ್ತಿ ||ಧ್ರುವ||
ಇದೇ ನಮ್ಮ ಮನೆಯು ಸದ್ಗುರು ಸ್ಮರಣೆಯು
ಇದೇ ನಮ್ಮ ವರ್ತನೆಯು ಸದ್ಗುರು ಪ್ರಾರ್ಥನೆಯು ||೧||
ಇದೇ ನಮ್ಮ ಗ್ರಾಮ ಸದ್ಗುರು ದಿವ್ಯನಾಮ
ಇದೇ ನಮ್ಮ ಸ್ತೋಮ ಸದ್ಗುರು ಆತ್ಮಾರಾಮ ||೨||
ಇದೇ ನಮ್ಮ ಭೂಮಿ ಸದ್ಗುರು ಘನಸ್ವಾಮಿ
ಇದೇ ನಮ್ಮ ಸೀಮಿ ಸದ್ಗುರು ಅಂತರ್ಯಾಮಿ ||೩||
ಇದೇ ನಮ್ಮ ದೇಶ ಸದ್ಗುರು ಉಪದೇಶ
ಇದೇ ನಮ್ಮಭ್ಯಾಸ ಸದ್ಗುರು ಜಗದೀಶ ||೪||
ಇದೇ ನಮ್ಮ ವಾಸ ಸದ್ಗುರು ಸಮರಸ
ಇದೇ ನಮ್ಮ ಗ್ರಾಸ ಸದ್ಗುರು ಪ್ರೇಮರಸ ||೫||
ಇದೇ ನಮ್ಮ ವ್ಯಸನ ಸದ್ಗುರು ನಿಜಧ್ಯಾಸ
ಇದೇ ನಮ್ಮ ಆಶೆ ಸದ್ಗುರು ಸುಪ್ರಕಾಶ ||೬||
ಇದೇ ನಮ್ಮಾಶ್ರಮ ಸದ್ಗುರು ನಿಜೋತ್ತಮ
ಇದೇ ನಮ್ಮುದ್ಯಮ ಸದ್ಗುರು ಸಮಾಗಮ ||೭||
ಇದೇ ನಮ್ಮ ಭಾಗ್ಯ ಸದ್ಗುರು ಸುವೈರಾಗ್ಯ
ಇದೇ ನಮ್ಮ ಶ್ರಾಧ್ಯ ಸದ್ಗುರು ಪಾದಯೋಗ್ಯ ||೮||
ಇದೇ ನಮ್ಮ ಕುಲವು ಸದ್ಗುರು ದಯದೊಲವು
ಇದೇ ನಮ್ಮ ಬಲವು ಸದ್ಗುರು ದಯಜಲವು ||೯||
ಇದೇ ನಮ್ಮಾಭರಣ ಸದ್ಗುರು ದಯಕರುಣ
ಇದೇ ದ್ರವ್ಯ ಧನ ಸದ್ಗತಿ ಸಾಧನ ||೧೦||
ಇದೇ ನಮ್ಮ ಕಾಯ ಸದ್ಗುರುವಿನುಪಾಯ
ಇದೇ ನಮ್ಮ ಮಾಯ ಸದ್ಗುರುವಿನ ಅಭಯ ||೧೧||
ಇದೇ ನಮ್ಮ ಪ್ರಾಣ ಸದ್ಗುರು ಚರಣ
ಇದೇ ನಮ್ಮ ತ್ರಾಣ ಸದ್ಗುರು ದರುಶನ ||೧೨||
ಇದೇ ನಮ್ಮ ಜೀವ ಸದ್ಗುರು ವಾಸುದೇವ
ಇದೇ ನಮ್ಮ ದೇವ ಸದ್ಗುರು ಆತ್ಮಲಿರುವ ||೧೩||
ಇದೇ ನಮ್ಮ ನಾಮ ಸದ್ಗುರು ಸದೋತ್ತಮ
ಇದೇ ನಮ್ಮ ನೇಮ ಸದ್ಗುರು ಸರ್ವೋತ್ತಮ ||೧೪||
ಇದೇ ನಮ್ಮ ತೀರ್ಥ ಸದ್ಗುರು ಸಹಿತಾರ್ಥ
ಇದೇ ನಮ್ಮ ಸ್ವಾರ್ಥ ಸದ್ಗುರು ಪರಮಾರ್ಥ ||೧೫||
ಇದೇ ನಮ್ಮ ಕ್ಷೇತ್ರ ಸದ್ಗುರು ಬಾಹ್ಯಂತ್ರ
ಇದೇ ನಮ್ಮ ಗಾತ್ರ ಸದ್ಗುರು ಘನಸೂತ್ರ ||೧೬||
ಇದೇ ನಮ್ಮ ಮತ ಸದ್ಗುರು ಸುಸನ್ಮತ
ಇದೇ ನಮ್ಮ ಪಥ ಸದ್ಗುರುಮಾರ್ಗ ದ್ವೈತ ||೧೭||
ಇದೇ ನಮ್ಮ ವೇದ ಸದ್ಗುರು ಶ್ರೀಪಾದ
ಇದೇ ನಮ್ಮ ಸ್ವಾದ ಸದ್ಗುರುಮಾರ್ಗ ನಿಜಬೋಧ ||೧೮||
ಇದೇ ನಮ್ಮ ಗೋತ್ರ ಸದ್ಗುರು ಸರ್ವಾಂತ್ರ
ಇದೇ ನಮ್ಮ ಸೂತ್ರ ಸದ್ಗುರು ಸದ್ಗುರು ಚರಿತ್ರ ||೧೯||
ಇದೇ ಸದ್ಯ ಸ್ನಾನ ಸದ್ಗುರು ಕೃಪೆ ಜ್ಞಾನ
ಇದೇ ಧ್ಯಾನ ಮೌನ ಸದ್ಗುರು ನಿಜಖೂನ ||೨೦||
ಇದೇ ಜಪತಪ ಸದ್ಗುರು ಸ್ವಸ್ವರೂಪ
ಇದೇ ಮೃತ್ಯುದ್ಯೋಪ ಸದ್ಗುರು ಸುಸಾಕ್ಷೇಪ ||೨೧||
ಇದೇ ನಮ್ಮ ನಿಷ್ಠಿ ಸದ್ಗುರು ಕೃಪಾದೃಷ್ಟಿ
ಇದೇ ನಮ್ಮಾಭೀಷ್ಠಿ ಸದ್ಗುರು ದಯಾದೃಷ್ಟಿ ||೨೨||
ಇದೇ ಪೂಜ್ಯಾಧ್ಯಕ್ಷ ಸದ್ಗುರು ಪ್ರತ್ಯಕ್ಷ
ಇದೇ ಸಂರಕ್ಷ ಸದ್ಗುರು ಕಟಾಕ್ಷ ||೨೩||
ಇದೇ ನಮ್ಮ ಊಟ ಸದ್ಗುರು ದಯನೋಟ
ಇದೇ ನಮ್ಮ ಆಟ ಸದ್ಗುರು ಪಾದಕೂಟ ||೨೪||
ಮಾತೃ ಪಿತೃ ಸದ್ಗುರು ಪರಬ್ರಹ್ಮ
ಭ್ರಾತೃ ಭಗಿನೀ ನಮ್ಮ ಸದ್ಗುರು ಪಾದಪದ್ಮ ||೨೫||
ಇದೇ ಬಂಧು ಬಳಗ ಸದ್ಗುರು ಎನ್ನೊಳಗ
ಇದೇ ಸರ್ವಯೋಗ ಬ್ರಹ್ಮಾನಂದ ಭೋಗ ||೨೬||
ಇದೇ ಸರ್ವಸೌಖ್ಯ ಮಹಿಪತಿ ಗುರುವಾಕ್ಯ
ಇದೇ ನಿಜ ಮುಖ್ಯ ಸದ್ಗತಿಗಿದೆ ಐಕ್ಯ ||೨೭||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments