ಆಲದೆಲೆಯ ಮ್ಯಾಲೆ ಮಲಗಿ

ಆಲದೆಲೆಯ ಮ್ಯಾಲೆ ಮಲಗಿ

( ಬಸಂತ್ ರಾಗ ದಾದರಾ ತಾಳ) ಆಲದೆಲೆಯ ಮ್ಯಾಲೆ ಮಲಗ್ಯುಂಗುಟ ಚಪ್ಪರಿಪನು ನೀನಾರೈ ಮೂಲರೂಪದ ನಿಜದೋರದೆ ಬಾಲಕನಾಗಿಹ ನೀನಾರೈ ||ಧ್ರುವ|| ಚೆಲುವ ಕಂಗಳ ನೋಟದಲ್ಹೊಳೆಯುತ ಜಲದೊಳಗಾಡುವನಾರೈ ಕಾಲುಡುಗಿಸಿ ಬೆನ್ನಿಲೆ ಬಲು ಕಠಿಣವ ತಾಳಿದವ ನೀನಾರೈ ||೧|| ಕೋರ್ಹಲ್ಲಲಿ ಬೇರನೆ ಅಗಳ್ಯಾಡುತ ದೋರುವ ನೀನಾರೈ ನರಮೃಗರೂಪದಿ ತರಳಗೊಲಿದು ಭರದಲಿ ಬಂದವನಾರೈ ||೨|| ಒಪ್ಪಿಲಿ ಮೂರು ಪಾದವ ಭೂಮಿಯೊಪ್ಪಿಸಿಕೊಂಡವನಾರೈ ಚಪ್ಪಗೊಡಲಿ ಕೈಯಲಿ ಪಿಡಕೊಂಡು ಇಪ್ಪವ ನೀನಾರೈ ||೩|| ಬಳ್ಳಿ ಹಿಡಿದು ಕಲ್ಲನೆ ಉದ್ಧರಿಸಿದ ಮಲ್ಲನು ನೀನಾರೈ ಗೊಲ್ಲತಿಯರ ಮೋಹಿಸಿ ಎಳೆದಾಡುವ ಚೆಲುವನು ನೀನಾರೈ ||೪|| ಒದಗಿ ತ್ರಿಪುರದಲಿ ಹಳಿದು ನಾರೇರ ವ್ರತ ಚದುರನು ನೀನಾರೈ ಕುದುರೆಯನೇರಿ ಹದನದಿ ತಿರವ್ಯಾಡುತ ರಾವುತ ನೀನಾರೈ ||೫|| ಕುರುಹುದೋರದೆ ನರನಾರಿಯರ ರೂಪದಲ್ಯಾಡಿದವನಾರೈ ಮರುಳ ಮಾಡ್ಯಸುರರ ಸುರರಿಗೆ ಅಮೃತವ ಬಡಿಸಿದವ ನೀನಾರೈ ||೬|| ಅಗಣಿತಗುಣದಲಿ ಬಗೆಬಗೆ ಆಡುವ ಸುಗುಣ ನೀನಾರೈ ಝಗಝಗಿಸುವ ಜಗನ್ಮನೋಹರನಾಗ್ಯಾಡುವ ನೀನಾರೈ ||೭|| ಖೂನ ಕುರುಹದೋರಿದ ಭಾನುಕೋಟಿ ತೇಜನಹುದೊ ಬಾರೈ ದೀನ ಮಹಿಪತಿ ಸನಾಥ ಮಾಡಿದ ದೀನೋದ್ಧಾರಹುದಹುದೈ ||೮||
ದಾಸ ಸಾಹಿತ್ಯ ಪ್ರಕಾರ
ಬರೆದವರು