ಅರಿಯರು ಮನುಜರರಿಯರು

ಅರಿಯರು ಮನುಜರರಿಯರು

( ರಾಗ ಪಂತುವರಾಳಿ ಅಟ ತಾಳ) ಅರಿಯರು ಮನುಜರರಿಯರು ||ಪ|| ಅರಿಯರು ಮನುಜರು ಅರಿತೂ ಅರಿಯರು ಧರೆ ಈರೇಳಕ್ಕೆ ಹರಿಯಲ್ಲದಿಲ್ಲವೆಂದು ||ಅ|| ನಾರದಮುನಿ ಬಲ್ಲ ವಾರಿಜೋದ್ಭವ ಬಲ್ಲ ಪಾರಾಶರ ಬಲ್ಲ ಮನು ಬಲ್ಲನು ಧೀರ ಭೀಷ್ಮನು ಬಲ್ಲ ಪಾರ್ವತಿ ಬಲ್ಲಳು ಕಾರುಣಿಕನು ಶ್ರೀ ಹರಿಯಲ್ಲದಿಲ್ಲವೆಂದು || ಶಿವ ಬಲ್ಲ ಧ್ರುವ ಬಲ್ಲ ದ್ರೌಪದಿ ಬಲ್ಲಳು ಅವನಿಪಾಲಕ ಜನಕನೃಪ ಬಲ್ಲನು ಯುವತಿಗೆ ಶಾಪವಿತ್ತ ಗೌತಮ ಮುನಿ ಬಲ್ಲ ಭವರೋಗ ವೈದ್ಯ ಶ್ರೀ ಹರಿಯಲ್ಲದಿಲ್ಲವೆಂದು || ದಿಟ್ಟ ಪ್ರಹ್ಲಾದ ಬಲ್ಲ ಕೆಟ್ಟ ಅಜಮಿಳ ಬಲ್ಲ ಸಿಟ್ಟಿನಿಂದಲಿ ಒದ್ದ ಭೃಗು ಬಲ್ಲನು ಕೊಟ್ಟ ಬಲಿ ಬಲ್ಲ ಮೊರೆಯಿಟ್ಟ ಗಜೇಂದ್ರ ಬಲ್ಲ ಸೃಷ್ಟೀಶ ಪುರಂದರ ವಿಠಲನೆ ಪರ ದೈವವೆಂದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು