ಅಮ್ಮ ನಿಮ್ಮ ಮಗ ಸುಮ್ಮನಿರುವನಲ್ಲ

ಅಮ್ಮ ನಿಮ್ಮ ಮಗ ಸುಮ್ಮನಿರುವನಲ್ಲ

ಅಮ್ಮ ನಿಮ್ಮ ಮಗ ಸುಮ್ಮನಿರುವನಲ್ಲ
ಜನ್ಮಜನ್ಮದಿ ರಂಗ ಇಂತ ಲಂಡನು ನೋಡಮ್ಮ ||ಪ||

ನೀರಿಗೆ ಹೋಗುವ ನಾರಿಯರನು ಕಂಡು
ಮೋರೆಯ ತಿರುಹಿ ಇದಿರಾಗಿ ನಿಂದು
ದಾರಿಯನಡಗಟ್ಟಿ ನೀರಿಗೆ ಸುಂಕವು
ಊರ ಎಲ್ಲರ ಕೂಡೆ ಭಂಡವ ಮಾಡಿದ ನೋಡಮ್ಮ ||೧||

ಪಶುವ ಕರೆಯುತಿಹ ಶಶಿಮುಖಿಯರ ಕಂಡು
ಹಸನಾಗಿಯೆ ಮುಂದೆ ಬಂದು ನಿಂದು
ಹೊಸಪರಿ ವಿಧದಿ ಹೋರಿಯ ಹಾಗೆ ನಿನ್ನ ಮಗ
ಹೊಸಪರಿಯಲಿ  ನಮ್ಮ ಭಂಡು ಮಾಡಿದ ನೋಡಮ್ಮ ||೨||

ಗೋಕುಲದೊಳಗುಳ್ಳ ಬೇಕಾದಂಗನೆಯರ
ಕಾಕು ಮಾಡಿದ ಕಾಣೆ ರಂಗ ನಿನ್ನಾಣೆ
ಸಾಕು ಸಾಕು ನಿನ್ನ ಮಗಗೆ ಬುದ್ಧಿಯ ಹೇಳೆ
ಶ್ರೀಕಾಂತ ಪುರಂದರವಿಠಲ ಬಂದ ಮನೆಗೆ ||೩||

---ಪುರಂದರದಾಸರು

 

ದಾಸ ಸಾಹಿತ್ಯ ಪ್ರಕಾರ
ಬರೆದವರು