ಅಪಮೃತ್ಯು ಪರಿಹರಿಸೊ ಅನಿಲ ದೇವ
( ರಾಗ ಕಾಂಬೋಧಿ(ಭೂಪ) ಝಂಪೆತಾಳ)
ಅಪಮೃತ್ಯು ಪರಿಹರಿಸೊ ಅನಿಲದೇವ
ಕೃಪಣ ವತ್ಸಲನೆ ಕಾವರ ಕಾಣೆ ಜಗದೊಳಗೆ ||ಪ||
ನಿನಗಿನ್ನು ಸಮರಾದ ಅನಿಮಿತ್ತ ಬಾಂಧವರು
ಎನಗಿಲ್ಲ ಆವಾವ ಜನುಮದಲ್ಲಿ
ಅನುದಿನವು ಎಮ್ಮನುದಾಸೀನ(/ಎಮ್ಮನೀನುದಾಸೀನ) ಮಾಡುವುದು
ಅನುಚಿತವು ನಿನಗೆ ಸಜ್ಜನ ಶಿಖಾಮಣಿಯೆ ||೧||
ಕರಣಾಭಿಮಾನಿಗಳು ಕಿಂಕರರು ಮೂರ್ಲೋಕ
ದೊರೆ ನಿನ್ನೊಳಗಿಪ್ಪ ಪರ್ವಕಾಲ
ಪರಿಸರನೆ ಈ ಭಾಗ್ಯ ದೊರೆತನಕೆ ಸರಿಯುಂಟೆ
ಗುರುವರನೆ ನೀ ದಯಾಕರನೆಂದು ಬಿನ್ನೈಪೆ ||೨|
ಭವರೋಗಮೋಚಕನೆ ಪವಮಾನರಾಯ ನಿ-
ನ್ನವರವನು ನಾನು ಮಾಧವಪ್ರಿಯನೆ
ಜವನ ಬಾಧೆಯ ಬಿಡಿಸು ಅವನಿಯೊಳು ಸುಜನರಿಗೆ
ದಿವಿಜಗಣ ಮಧ್ಯದೊಳು ಪ್ರವರ ನೀನಹುದೋ ||೩||
ಜ್ಞಾನಾಯು ರೂಪಕನು ನೀನಹುದೊ, ವಾಣಿ ಪಂ-
ಚಾನನಾದ್ಯಮರರಿಗೆ ಪ್ರಾಣದೇವ
ದೀನವತ್ಸಲನೆಂದು ನಾನಿನ್ನ ಮೊರೆಹೊಕ್ಕೆ
ದಾನವಾರಣ್ಯ ಕೃಶಾನು ಸರ್ವದಾ ಎಮ್ಮ ||೪||
ಸಾಧನ ಶರೀರವಿದು ನೀ ದಯದಿ ಕೊಟ್ಟದ್ದು
ಸಾಧಾರಣವಲ್ಲ ಸಾಧುಪ್ರಿಯನೆ
ವೇದವಾದೋದಿತ ಜಗನ್ನಾಥ ವಿಠಲನ
ಪಾದಭಜನೆಯನಿತ್ತು ಮೋದಕೊಡು ಸತತ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments