ಅನ್ಯ ಸತಿಯರೊಲುಮೆಗೊಲಿದು

ಅನ್ಯ ಸತಿಯರೊಲುಮೆಗೊಲಿದು

( ರಾಗ ಪಂತುವರಾಳಿ/ಕಾಮವರ್ಧಿನಿ. ಅಟ ತಾಳ)

 

ಅನ್ಯ ಸತಿಯರೊಲುಮೆಗೊಲಿದು ಅಧಮಗತಿಗೆ ಬೀಳಲೇಕೆ ||ಪ||

ತನ್ನ ಸತಿಯರೊಲುಮೆಗೊಲಿದು ತಾನು ಸುಖಿಸಬಾರದೆ ||ಅ||

 

ಮಿಂದು ಮಲವನ್ನ ಬಿಡಿಸಿ ಮೇಲು ವಸ್ತ್ರವನ್ನು ತೊಡಿಸಿ

ಅಂದವಾದ ಆಭರಣವಿಟ್ಟು ಅರ್ತಿಯಿಂದ ನೋಡುತ

ಗಂಧ ಕಸ್ತೂರಿ ಪುನುಗು ಪೂಸಿ ಘಮಕದಿಂದ ಹೂವ ಮುಡಿಸಿ

ಸಂಕ್ಷಮದಿ ಸಂತೋಷಪಡುವ ಸುಖವು ತನಗೆ ಸಾಲದೆ || ೧||

 

ಪೊಂಬಣ್ಣ ಎಸೆವ ಮೈ , ಅದರೊಳು ಒಲಿವ ಕುಚಕ್ಕೆ ಕೈಯನಿಟ್ಟು

ಕಂಬುಕಂಧರವ ನೋಡಿ ಕಸ್ತೂರಿನಿಟ್ಟು ಮುಟ್ಟಿಸುತ

ಹಂಬಲಿಸಿ ಸತಿಯ ನೋಡಿ ಹಲವು ಬಂಧದಿಂದ ಕೂಡಿ

ಸಂಕ್ಷಮದಿ ಸಂತೋಷಪಡುವ ಸುಖವು ತನಗೆ ಸಾಲದೆ || ೨||

 

ಸತಿ ಪತಿಯು ಏಕವಾಗಿ ಸರ್ವಜನರ ಹಿತವ ಚಿಂತಿಸಿ

ಅತಿಥಿಯನ್ನು ಪೂಜೆ ಮಾಡಿ ಒಂದೆನ್ನಿಸಿಕೊಳ್ಳುತ

ಕ್ಷಿತಿಯೊಳಧಿಕವಾದ ಗುರು ಪುರಂದರವಿಠಲನ್ನ ಪಾದವನು ಸ್ಮರಿಸಿ

ಸತಿಸುತರುಹಿತರು ನೀವು ಸುಖದಿಂದ ಆಳಿರೋ ||೩||

ದಾಸ ಸಾಹಿತ್ಯ ಪ್ರಕಾರ
ಬರೆದವರು