ಅನುದಿನದಲಿ ಬಂದು ತನುವ ಸ್ನೇಹವ ಮಾಡಿ

ಅನುದಿನದಲಿ ಬಂದು ತನುವ ಸ್ನೇಹವ ಮಾಡಿ

( ರಾಗ ಯದುಕುಲಕಾಂಭೋಜ ತ್ರಿಪುಟತಾಳ) ಅನುದಿನದಲಿ ಬಂದು ತನುವ ಸ್ನೇಹವ ಮಾಡಿ ಎನ ಬಿಟ್ಟು ಹೋಗುತೀಯಾ ಜೀವವೆ ||ಪ|| ಘನ ಕೋಪದಿಂದ ಬಂದು ಯಮನವರೆಳೆದೊಯ್ವಾಗ ನಿನ ಕೂಡಿನ್ನೇತರ ಮಾತೋ ಕಾಯವೆ ||ಅ|| ಬೆಲ್ಲದ ಹೇರಿನಂತೆ ಬೇಕಾದ ಬಂಧುಬಳಗ ನಿಲ್ಲೋ ಮಾತು ಹೇಳುತೇನೋ ಜೀವವೆ ನಿಲ್ಲಗೊಡದೆ ಬಂದು ಯಮನವರೆಳೆದೊಯ್ಯುವಾಗ ಬೆಲ್ಲ ಬೇವಾಯಿತಲ್ಲೋ ಕಾಯವೆ ಸಕ್ಕರೆ ಹೇರಿನಂತೆ ಸವಿದುಂಡು ಪಾಯಸ ಬಿಟ್ಟಗಲಿ ಹೋಗುತೀಯ ಜೀವವೆ ದಕ್ಕಗೊಡದೆ ಬಂದು ಯಮನವರೆಳೆದೊಯ್ಯುವಾಗ ಸಕ್ಕರೆ ವಿಷವಾಯಿತಲ್ಲೋ ಕಾಯವೆ ಅಂದಣದೈಶ್ವರ್ಯ ದಂಡಿಗೆ ಪಲ್ಲಕ್ಕಿ ಮಂದಗಮನೆಯರು ಜೀವವೆ ಮಂದಗಮನೆಯರು ಮಡದಿಮಕ್ಕಳಿನ್ನಾರೋ ಬಂದಂತೆ ಹೋಗುವ್ಯೇನೋ ಕಾಯವೆ ಸೋರುವೋ ಮನೆಯೊಳು ಮೌನ ಮಾನಾದಿಗಳು ಬೇರಾಯಿತು ನಿನ್ನ ಮನಸು ಜೀವವೆ ತೊರಗೊಡದೆ ಬಂದು ಯಮನವರೆಳೆದೊಯ್ಯುವಾಗ ಯಾರಿಗೆ ಯಾರಿಲ್ಲೋ ಕಾಯವೆ ನೀರ ಮೇಲಣ ಗುಳ್ಳೆ ತೋರಿ ಒಡೆದಂತೆ ಹೇಳದೆ ಹೋಗುತೀಯೆ ಜೀವವೆ ಈ ರೀತಿ ಸಭೆಗೆ ಬಂದು ಯಮನವರೆಳೆದೊಯ್ಯುವಾಗ ಆರಿಗೆ ಪೇಳುವುದು ಕಾಯವೆ ಮಾಳಿಗೆ ಮನೆ ಬಿಟ್ಟು ಜಾಳಿಗೆ ಹೊನ್ನ ಬಿಟ್ಟು ಹೇಳದೆ ಹೋಗುತಿಯ ಜೀವವೆ ಹೇಳಲಿ ಸಾರೆ ಬಂದು ಯಮನವರೆಳೆದೊಯ್ಯುವಾಗ ಮಾಳಿಗೆ ಮನೆಯಿನ್ನೇಕೆ ಕಾಯವೆ ಹುಟ್ಟಿದ್ದು ಹೊಲೆಯೂರು ಬೆಳೆದದ್ದು ಮೊಲೆಯೂರು ಇಟ್ಟದ್ದು ಈ ಊರು ಎತ್ತಿದ್ದು ಕಾಡೂರು ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ್ನ ಗಟ್ಯಾಗಿ ಪೂಜೆಯ ಮಾಡೋ ಕಾಯವೆ
ದಾಸ ಸಾಹಿತ್ಯ ಪ್ರಕಾರ
ಬರೆದವರು