ಅಚ್ಯುತಾನಂತ ಗೋವಿಂದ

ಅಚ್ಯುತಾನಂತ ಗೋವಿಂದ

( ರಾಗ ಮಧ್ಯಮಾವತಿ ಅಟ ತಾಳ) ಅಚ್ಯುತಾನಂತ ಗೋವಿಂದ, ಹರಿ, ಸಚ್ಚಿದಾನಂದ ಸ್ವರೂಪ ಮುಕುಂದ ||ಪ|| ಕೇಶವ ಕೃಷ್ಣ ಮುಕುಂದ, ಹರಿ, ವಾಸುದೇವ ಗುರು ಜಗದಾದಿವಂದ್ಯ ಯಶೋದೆಯ ಸುಕೃತದ ಕಂದ, ಸ್ವಾಮಿ, ಶೇಷ ಶಯನ ಭಕ್ತ ಹೃದಯಾನಂದ ನಾರಾಯಣ ನಿನ್ನ ನಾಮವೆನ್ನ, ನಾಲಿಗೆ ಮೇಲಿರಬೇಕೆಂಬ ನೇಮ ನಾನು ಬೇಡುವೆ ನಿನ್ನ ನಾಮ, ಪ್ರಾಣ, ಪಯಣ ಸಮಯಕೊದಗಲಿ ಗುಣಧಾಮ ಮಾಧವ ಮಂಗಳಗಾತ್ರ, ಸ್ವಾಮಿ, ಯಾದವ ಕೈಲಾಸ ವಾಸನ ಮಿತ್ರ ಮಹಿಮೆ ಕೇಳಿದರೆ ವಿಚಿತ್ರ, ನಿನ್ನ, ಮನ ಮೆಚ್ಚಲಿ ಸತ್ಯಭಾಮಾಕಳತ್ರ ಗೋವಿಂದ ಗೋಪಾಲ ಬಾಲ, ಸೋಳ ಸಾಸಿರ ಗೋಪೇರ ಆನಂದ ಲೀಲಾ ನೀಲ ಮಣಿ ಮುಕ್ತಾಮಾಲ, ನಿಮ್ಮನೇನೆಂದು ಕರೆಯಲಿ ಸುಗ್ರೀವ ಪಾಲ ವಿಷ್ಣು ಚಕ್ರವು ಬಂದು ಸುತ್ತಿ, ಮೂರು ಸೃಷ್ಟಿಯನೆಲ್ಲ ತಿರುಗಿ ಬೆನ್ನಟ್ಟಿ ಕೃಷ್ಣ ಸಲಹೆಂದು ಮೊರೆಯಿಟ್ಟ, ಮುನಿ ಶ್ರೇಷ್ಟಗಿಷ್ಟರ ಮೇಲೆ ಅಭಯವ ಕೊಟ್ಟೆ ಮಧುಸೂದನ ಮಾರಜನಕ, ಮದಗಜ ಸೀಳಿ ಮಲ್ಲರ ಗೆಲಿದೆ ತವಕ ಒದಗಿ ಕಂಸನ ಕೊಂದ ಬಳಿಕ, ನೀ, ಮುದುಕಗೆ ಪಟ್ಟವ ಕಟ್ಟಿದ್ಯೋ ಧನಿಕ ತ್ರಿವಿಕ್ರಮ ತ್ರೈಲೋಕ್ಯನಾಥ, ದೇವ, ತ್ರಿಪುರದ ಸತಿಯರ ವ್ರತಕೆ ವಿಘಾತ ಯದುವಂಶ ಪಾಂಡವ ಪ್ರೀತ, ಎನ್ನ, ಹೃದಯದೊಳಡಗಿರೊ ಶ್ರೀ ಜಗನ್ನಾಥ ವಾಮನ ರೂಪಿಲಿ ಬಂದು, ಬಲಿಯ ದಾನವ ಬೇಡಲು ಉಚಿತವು ಎಂದು ಧಾರೆಯನೆರೆಯಲು ಅಂದು, ಬೆಳೆದು ಧಾರಿಣಿಯೆಲ್ಲವನಳೆದ್ಯೊ ನೀನಂದು ಶ್ರೀಧರ ಶೃಂಗಾರ ಹಾರ, ದಿವ್ಯ, ಶ್ರೀವತ್ಸಲಾಂಛನ ಶ್ರೀ ರಘುವೀರ ವಾರಿಧಿ ಸಮ ಗಂಭೀರ, ಧೀರ, ಕ್ರೂರ ರಕ್ಕಸರನೆಲ್ಲರ ಸಂಹಾರ ಹೃಷಿಕೇಶ ವೃಂದಾವನದಲಿ, ನೀ, ಹರುಷದಿ ಕೊಳಲನೂದುತ ಯಮುನೆಯಲಿ ಸತಿಯರ ಸಮ್ಮೇಳದಲಿ, ನೀ, ಧರಿಸಿದ್ಯೊ ಮಂದಾರ ಮಾಲೆ ಕೊರಳಲ್ಲಿ ಪದ್ಮನಾಭ ಕೇಳೊ ಘನ್ನ, ಪಾದ, ಪದ್ಮವ ತೋರಿಸೊ ಬೇಗನೆ ನಿನ್ನ ಮುದ್ದು ಮುಖವ ತೋರಿಯೆನ್ನ, ಬೇಗ, ಉದ್ಧಾರ ಮಾಡೆಂದು ಬೇಡುವೆ ನಿನ್ನ ದಾಮೋದರ ಗುಣಧಾಮ, ಸ್ವಾಮಿ, ದಾನವಾಂತಕ ಯದುಕುಲ ಸಾರ್ವಭೌಮ ನೀಲಮೇಘನಿಭಶ್ಯಾಮ, ಕೃಷ್ಣ, ನೀಳಾಪತಿಯೆಂಬ ಬಹು ಪುಣ್ಯನಾಮ ಸಂಕರ್ಷಣ ದನುಜಹರಣ, ದೇವ, ಪಂಕಜಮುಖಿ ದ್ರೌಪದಿ ಮೇಲೆ ಕರುಣ ಕುಂಕುಮಾಂಕಿತ ರೇಖಾ ಚರಣ, ನಿಜ, ಕಂಕಣ ಕೇಯೂರ ಕೌಸ್ತುಭಾಭರಣ ವಾಸುದೇವ ಕೇಳೊ ನಿನ್ನ, ದಿವ್ಯ, ಸಾಸಿರ ನಾಮವ ನೆನೆವನೆ ಧನ್ಯ ಬೇಸರದೆ ಸಲಹಬೇಕೆನ್ನ ತುಸ ಘಾಸಿಯ ಮಾಡದೆ ಕರುಣಾ ಸಂಪನ್ನ ಪ್ರದ್ಯುಮ್ನನೆಂದು ನಾ ಕರೆದೆ, ಎನ್ನ, ಬದ್ಧವಾದ ದುಷ್ಕರ್ಮವ ಕಳೆದೆ ದುರ್ಬುದ್ಧಿ ದುರ್ವಾಕ್ಯ ಮರೆದೆ, ಸಾಧು, ಸಜ್ಜನರ ಸಂಗ ನಿನ್ನಿಂದ ಬೆರೆದೆ ಅನಿರುದ್ಧ ಅನುದಿನದಲ್ಲಿ, ನೀ, ವಿನಯದಿಂದಿದ್ದೆ ಗೋಪಿಯರ ಮನೆಯಲ್ಲಿ ಸನಕಾದಿ ವಂದ್ಯ ನಿನ್ನಗಲಿ, ಒಂದು, ಕ್ಷಣ ಬಿಟ್ಟಿರಲಾರೆ ನಿಲ್ಲೊ ಮನದಲ್ಲಿ ಪುರುಷೋತ್ತಮಗಾರು ಸಾಟಿ, ಪರ, ಬ್ರಹ್ಮ ಸ್ವರೂಪಿಯೆ ನಿನಗಾರೋ ಪೋಟಿ ಮಹಿಮೆ ಕೇಳಿದರೊಂದು ಕೋಟಿ, ನಿನ್ನ, ಹೃದಯದಿ ಕಂಡ ಬ್ರಹ್ಮಾಂಡ ಕಿರೀಟಿ ಅಧೋಕ್ಷಜ ಅಸುರ ಸಂಹಾರಿ, ಕೃಷ್ಣ, ಅದ್ಭುತರೂಪ ಶಿಶುಪಾಲನ ವೈರಿ ಭಕ್ತರ ಪಾಲಿಪ ಶೌರಿ, ಅಜಾಮಿಳ ನಾರಗನೆನ್ನೆ ಕಾಯ್ದೆ ಮುರಾರಿ ನರಸಿಂಹ ರೂಪವ ತಾಳ್ದೆ, ಕಂದ, ಕರೆಯೆ ಕಂಭದಿ ಬಂದು ಕರುಣದಿ ಕಾಯ್ದೆ ದುರುಳ ಹಿರಣ್ಯಕನ ಸೀಳ್ದೆ, ಅವನ, ಕರುಳು ಬಗಿದು ವನಮಾಲೆಯ ಹಾಕಿದೆ ಅಚ್ಯುತ ನೀನತಿ ಮುದ್ದು, ಗೋಪಿ, ಬಚ್ಚಿಟ್ಟ ಹಾಲು ಮೊಸರು ಬೆಣ್ಣೆ ಮೆದ್ದು ತುಚ್ಛ ಶಕಟನ ಕಾಲಿಲೊದ್ದು, ಕಾಡು-ಕಿಚ್ಚನು ನುಂಗಿ ಪಾಲಿಸಿದೆಯೊ ಗೆದ್ದು ಜನಾರ್ದನ ರೂಪ ನೀನಾಗಿ, ಎನ್ನ, ಮನದ ಕರ್ಮವ ತೊಲಗಿಸೊ ಮುಂದಾಗಿ ಮುನಿಗಳೆಲ್ಲರು ಒಂದಾಗಿ, ಈ, ತನು ನಿನ್ನೆದೆಂಬರೊ ಕೇಳೊ ನಿಜವಾಗಿ ಉಪೇಂದ್ರ ರೂಪದಿ ಬಂದೆ, ಅಪ್ರ-ಮೇಯ ಕಾಳಿಂಗನ ಮಡುವ ಧುಮುಕಿದೆ ನಾಗನ ಹೆಡೆಗಳ ತುಳಿದೆ, ನಾಗ-ಪತ್ನಿಯರು ಬೇಡೆ ಪತಿಯ ಪಾಲಿಸಿದೆ ಹರಿ ಹರಿಯೆಂದರೆ ಪಾಪ-ರಾಶಿ, ಹರಿದು ಹೋಯಿತು ಎನ್ನ ಮನದ ಸಂತಾಪ ಸರ್ವರೊಳಗೆ ವಿಶ್ವರೂಪ, ನಿನ್ನ, ನೆರೆ ನಂಬಿದವರನು ಸಲಹುವ ಭೂಪ ಕೃಷ್ಣ ಕೃಷ್ಣನೆಂಬ ಸೊಲ್ಲ, ಕೇಳಿ, ನಷ್ಟವಾಯಿತು ಎನ್ನ ಪಾಪಗಳೆಲ್ಲ ಮುಟ್ಟಿ ಭಜಿಸಿರೊ ನೀವೆಲ್ಲ, ಪುರಂದರ ವಿಠಲನ್ನದೆ ಮತ್ತೆ ಬೇರಿಲ್ಲ
ದಾಸ ಸಾಹಿತ್ಯ ಪ್ರಕಾರ
ಬರೆದವರು