ಅಂದಿಗಲ್ಲದೆ ಮನದ ಪರಿತಾಪವಡಗದೊ

ಅಂದಿಗಲ್ಲದೆ ಮನದ ಪರಿತಾಪವಡಗದೊ

( ರಾಗ ಮುಖಾರಿ ಅಟ ತಾಳ) ಅಂದಿಗಲ್ಲದೆ ಮನದ ಪರಿತಾಪವಡಗದೊ ಮು- ಕುಂದ ಮಾಧವ ಮುರಾರೆ ಶೌರೇ ||ಪ|| ಎಂದಿಗೆ ನಿನ್ನ ಭಕ್ತರ ಸಂಗ ಸೌಖ್ಯಗಳೊ ಎಂದಿಗಭಯವ ಪಡೆವೆನೊ ಕೃಷ್ಣ ||ಅ|| ಎಂದಿಗೀ ಜನನ ಮರಣಾದಿಗಳು ಪರಿಹರವು ಎಂದಿಗೆ ಏಕಾಂತ ಭಕ್ತಿಯೋ ಕೃಷ್ಣ ಎಂದಿಗೀ ಮಾನಾಪಮಾನ ಸುಖ ದುಃಖ ನಿಂದೆ ವಂದನೆಗಳಲಿ ಸಮತೆಯೊ ಕೃಷ್ಣ ಎಂದಿಗೆ ಈ ಹೀನಜನ ಸಂಗ ಪರಿಹರವೊ ಎಂದಿಗೆ ಸುಜ್ಞಾನ ಪಡೆವೆನೋ ಕೃಷ್ಣ ಎಂದಿಗೆನ್ನದು ತನ್ನದೆಂಬ ದುರ್ಮೋಹ ವೃಂದಗಳ ಕಡೆಗಣಿಪೆನೋ ಕೃಷ್ಣ || ಎಂದಿಗೆ ಈ ಕರ್ಮ ಕಾನನವ ತರಿಪುದೊ ಎಂದಿಗಪರೋಕ್ಷ ಸುಖವೋ ಕೃಷ್ಣ ಎಂದಿಗೆ ಶಮದಮಗಳನ್ನು ನಾ ಪಡೆವುದೋ ಎಂದಿಗಾಸೆ ನಿರಾಸೆಯೋ ಕೃಷ್ಣ ಎಂದಿಗೀ ಕಾಮಸಂಕಲ್ಪಾದಿ ದೋಷಗಳ ದ್ವಂದ್ವಗಳ ಕಡೆಗಣಿಪೆನೋ ಕೃಷ್ಣ ಎಂದಿಗೀ ಕಾಯ ಕರುಣಾದಿಗಳು ನಾನಲ್ಲ- ವೆಂದೆಂಬ ನಿಜದ ನೆಲೆಯೊ ಕೃಷ್ಣ || ದುರಿತಕೋಟಿಗಳನಳವಡಿಸಿಪ್ಪ ಸಂಸಾರ ಸೆರೆಮನೆಯ ಕಳೆವುದೆಂದೋ ಕೃಷ್ಣ ಕರಣಗಳ ಕಾದಾಟವನು ಬಿಡಿಸುವಭ್ಯಾಸವನು ನಾನು ಪಡೆವುದೆಂದೋ ಕೃಷ್ಣ ತರತರದ ತಾಪತ್ರಯಗಳನ್ನು ನೀಗಿಸಿ ಸ್ಥಿರ ಚಿತ್ತ ಪಡೆವುದೆಂದೋ ಕೃಷ್ಣ ಸಿರಿ ಪುರಂದರ ವಿಠಲರಾಯ ನಿನ್ನಯ ದಿವ್ಯ- ಚರಣದೊಲುಮೆಯು ಎಂದಿಗೋ ಕೃಷ್ಣ ||
ದಾಸ ಸಾಹಿತ್ಯ ಪ್ರಕಾರ
ಬರೆದವರು