ಮುಂಡಿಗೆ - 3
ಒಂಬತ್ತು ಹೂವಿಗೆ ಒಂದೇ ನಾಳವು ಚಂದಮಾಮ ||ಪ||
ತುಂಬಿ ನಾಳತುದಿ ತುಂಬಿ ಭಾನು ಪ್ರಭೆ ಚಂದಮಾಮ ||ಅ.ಪ||
ಕದರು ಗಾತರ ಕಂಬ ತೆಕ್ಕೆ ಗಾತರ ಹೂವು ಚಂದಮಾಮ|
ಆನೆ ಗಾತರ ಕಾಯಿ ಒಂಟೆ ಗಾತರ ಹಣ್ಣು ಚಂದಮಾಮ ||೧||
ಕಾಲಿಲ್ಲದಾತನು ಹತ್ತಿದನಾ ಮರವನು ಚಂದಮಾಮ|
ಕೈಯಿಲ್ಲದಾತನು ಕೊಯ್ದನಾ ಹಣ್ಣನು ಚಂದಮಾಮ ||೨||
ನೆತ್ತಿಲ್ಲದಾತನು ಹೊತ್ತನಾ ಹಣ್ಣ ಚಂದಮಾಮ|
ತಳವಿಲ್ಲದಾ ಗೂಡೆಯಲಿಳಿಸಿದನಾ ಹಣ್ಣ ಚಂದಮಾಮ||೩||
ಮಾರ್ಗ ತಪ್ಪಿ ಮಾರ್ಗ ಹಿಡಿದು ನಡೆದರು ಚಂದಮಾಮ|
ಸದ್ದಿಲ್ಲದಾ ಸಂತೇಲಿಳಿಸಿದರಾ ಹಣ್ಣ ಚಂದಮಾಮ ||೪||
ರೊಕ್ಕವಿಲ್ಲದಾತ ಕೊಂಡನಾ ಹಣ್ಣ ಚಂದಮಾಮ|
ಮೂಗಿಲ್ಲದಾತ ಮೂಸಿದನಾ ಹಣ್ಣ ಚಂದಮಾಮ ||೫||
ಕಣ್ಣಿಲ್ಲದಾತನು ಕೆಂಪಾನೆ ಹಣ್ಣೆಂದ ಚಂದಮಾಮ|
ಅಂಗುಳಿಲ್ಲದಾತ ನುಂಗಿದನಾ ಹಣ್ಣ ಚಂದಮಾಮ ||೬||
ಬಾಯಿಲ್ಲದಾತ ತಿಂದು ಬಸಿರಲಿಂಬಿಟ್ಟ ಚಂದಮಾಮ|
ಸುಲಭ ಪದವಿದು ನಳಿನಜಾಂಡದೊಳು ಚಂದಮಾಮ ||೭||
ಗುರುವಿನ ಮಹಿಮೆ ಗುರುವೆ ತಾ ಬಲ್ಲನು ಚಂದಮಾಮ|
ಮೂಢನಾದವನೇನು ಬಲ್ಲನು ಈ ಮಾತ ಚಂದಮಾಮ||೮||
ಕನಕನಾಡಿದ ಗುಟ್ಟು ಆದಿಕೇಶವ ಬಲ್ಲ ಚಂದಮಾಮ|
ತಿಳಿದವರು ಪೇಳಿರಿ ಹಳೆಗನ್ನಡವ ಚಂದಮಾಮ ||೯||
ಭಾವಾರ್ಥ:- ಜೀವಾತ್ಮ ನವವಿಧ ಭಕ್ತಿಯ ಮುಖಾಂತರ ಪರಮಾತ್ಮನ ಅನುಗ್ರಹಕ್ಕೆ ಪಾತ್ರವಾಗಿ ಒಂದಾದುದು ಈ ಮುಂಡಿಗೆಯ ವಸ್ತು.
ಅರ್ಥ:- ಒಂಬತ್ತು ಹೂವು = ನವವಿಧ ಭಕ್ತಿ
ಚರಣ ೧:- ಕಡ್ಡಿ ಗಾತ್ರದ ಗಿಡದಲ್ಲಿ (ನಮ್ಮ ಪುಟ್ಟ ಹೃದಯದಲ್ಲಿ) ಭಕ್ತಿಯ ತೀವ್ರತೆಯಿಂದಾಗಿ ಹೂವು, ಕಾಯಿ, ಹಣ್ಣು ವಿಸ್ತಾರಗೊಂಡದ್ದನ್ನು ಸೂಚಿಸುತ್ತದೆ.
ಚರಣ ೨:- ಮನೋ ಮಾರ್ಗದಿಂದ ಬೆಳೆದ ಆ ಭಕ್ತಿವೃಕ್ಷವನ್ನು ಹತ್ತಲು ಆತ್ಮನಿಗೆ ಕಾಲಿಲ್ಲ ಕೊಯ್ಯಲು ಕೈಯಿಲ್ಲ. ಆದರೂ ಆ ಮರವ ಹತ್ತಿ ಹಣ್ಣನ್ನು ಕೊಯ್ದನಾ ಪರಮಾತ್ಮನು.
ಚರಣ ೩:- ನೆತ್ತಿಯಿಲ್ಲದ ಚಿತ್ತ ಅದನ್ನು ಹೊತ್ತುಕೊಂಡು ತಳವಿಲ್ಲದ ಬ್ರಹ್ಮಸ್ಥಾನದ ಬುಟ್ಟಿಯಲ್ಲಿಟ್ಟನು.
ಚರಣ ೪:- ಬಾಹ್ಯ ಜಗತ್ತಿನ ಪ್ರವೃತ್ತಿ ಮಾರ್ಗವನ್ನು ಬಿಟ್ಟು ಅಂತರ ಜಗತ್ತಿನ ದೈವೀ ಮಾರ್ಗವನ್ನು ಹಿಡಿದು ನಿಶ್ಶಬ್ದವಾದ ಸಂತೆಯಲ್ಲಿ (ಪರಮಾತ್ಮನ ಸಾನ್ನಿಧ್ಯ) ಇಳಿಸಿದ.
ಚರಣ೫:-ಪ್ರಾಪಂಚಿಕ ನಾಣ್ಯವಿಲ್ಲದ ಪರಮಾತ್ಮ ಅದನ್ನು ಕೊಂಡನು. ಮೂಗಿಲ್ಲದಾತನು (ವಾಸನಾರಹಿತನಾದ ಪರಮಾತ್ಮ) ಅದನ್ನು ಮೂಸಿ ನೋಡಿದನು.
ಚರಣ ೬:- ಪ್ರಾಕೃತ ಕಣ್ಣಿಲ್ಲದಿದ್ದರೂ ಅಪ್ರಾಕೃತ ಕಣ್ಣಿನಿಂದ ಅದನ್ನು ನೋಡಿ ಕೆಂಪಾದ ಹಣ್ಣು ಪಕ್ವವಾಗಿದೆ ಎಂದನು. ಪ್ರಾಕೃತ ಅಂಗುಳಿಲ್ಲದಿದ್ದರೂ ಅಪ್ರಾಕೃತ ಅಂಗುಳಿನಿಂದ ಅದನ್ನು ನುಂಗಿದನು.
ಚರಣ ೭:- ಬಾಯಿಲ್ಲದಾತ ಅದನ್ನು ತನ್ನ ಹೊಟ್ಟೆಯ ಒಳಗಿಟ್ಟು ಇಂಬುಗೊಟ್ಟ.
ಚರಣ ೮:- ಒಬ್ಬರ ಯೋಗ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಆ ವ್ಯಕ್ತಿಯಲ್ಲೂ ಯೋಗ್ಯತೆ ಇರಬೇಕು. ಯೋಗ್ಯನ ಯೋಗ್ಯತೆಯನ್ನು ಅಯೋಗ್ಯ ಗುರುತಿಸಲಾರ.
ಚರಣ೯:- ಕನಕನ ಮಾತಿನರ್ಥವನ್ನು ಆದಿಕೇಶವ ಬಲ್ಲ. ತಿಳಿದವರು ಬಿಡಿಸಿರಿ ಈ ಒಗಟನ್ನು ಎನ್ನುತ್ತಾರೆ ಕನಕದಾಸರು. ಹಳೆಗನ್ನಡ = ಒಗಟು, ಮುಂಡಿಗೆ.
(ಹಿಂದೆ ಒಂದು ವಚನದಲ್ಲಿ ಒಗಟು ಎಂಬ ಅರ್ಥದಲ್ಲಿ ‘ಕನ್ನಡ’ ಎಂಬ ಪದ ಬಳಕೆಯಾಗಿದೆ: “ಅನು ನೀನೆಂಬ ಕನ್ನಡ ಕಳೆಯಿತ್ತು”)
Forums
- Log in to post comments