ಮುಂಡಿಗೆ -2
ಮುಂಡಿಗೆ -2
ಓಹೋ ಎನ ಜೀವ ಮೈಯೆಲ್ಲ ನವಗಾಯ ||ಪ||
ಗಾಯ ಕಟ್ಟುವರಿಲ್ಲ ಗಾಳಿ ಹಾಕುವರಿಲ್ಲ. ||ಅ.ಪ.||
ಮಾಡಿಲ್ಲ ಮಳೆಯಿಲ್ಲ ಮರದ ಮೇಲೆ ನೀರ ಕಂಡೆ
ಕಾಡು ಸುಡುವುದ ಕಂಡೆ ಬೂದಿಯ ಕಾಣಲಿಲ್ಲ. ||೧||
ಬಿತ್ತಲಿಲ್ಲ ಬೆಳೆಯಲಿಲ್ಲ ನೆಟ್ಟು ನೀರ ತೋರಲಿಲ್ಲ
ಹೊತ್ತುಕೊಂಡು ತಿರುಗಿದೆ ರೊಕ್ಕದಾ ಪ್ರಾಣಿಯನು. ||೨||
ಅಡಿಕೆಯಷ್ಟು ಆಕಳಣ್ಣ ಹಿಡಿಕೆಯಷ್ಟು ಕೆಚ್ಚಲಣ್ಣ
ಒಡನೆ ಕರೆದಾರ ಕರಿತೈತಿ ರಂಜಣಿಗಿ ಹಾಲಣ್ಣ. ||೩||
ಮೂರು ಮೊಳದಾ ಬಳ್ಳಿಗೆ ಆರು ಮೊಳದ ಕಾಯಣ್ಣ
ಆರು ಹತ್ತರ ಮೊಳದ, ಕಾಯಿಕೊಯ್ಯುವ ಕುಡುಗೋಲಣ್ಣ. ||೪||
ಊರ ಮುಂದೆ ಹಿರಣ್ಯಕನ ಕೊರಳ ಕೊಯ್ವದ ಕಂಡೆ
ಕೊರಳಕೊಯ್ವದ ಕಂಡೆ ರಕುತವ ಕಾಣಲಿಲ್ಲ. ||೫||
ಕಾಗಿನೆಲೆಯ ಕನಕದಾಸ ಹೇಳಿದಂಥ ಮುಂಡಿಗೆಯ
ಮಿಗೆ ಒಳ ಹೊರಗೆಲ್ಲ ಬಲ್ಲ ಬಾಡದಾದಿ ಕೇಶವರಾಯ. ||೬||
***************************
ಭಾವ:- ಸ್ಥೂಲ, ಸೂಕ್ಷ್ಮ, ಕಾರಣ ದೇಹಗಳನ್ನೊಳಗೊಂಡ ಈ ಮನುಷ್ಯ ದೇಹದ ವೈಚಿತ್ರ್ಯಗಳನ್ನು ಕನಕದಾಸರು ಈ ಮುಂಡಿಗೆಯಲ್ಲಿ ತಿಳಿಸಿದ್ದಾರೆ. ಜನಸಾಮಾನ್ಯರನ್ನು ಭೌತಸ್ಥರದಿಂದ ಆಧ್ಯಾತ್ಮ ಸ್ತರದತ್ತ ಎತ್ತುವಂಥ, ಪ್ರಜ್ಞಾವಂತರನ್ನಾಗಿ ಮಾಡುವಂಥ ಪ್ರಯೋಗವನ್ನು ಇಲ್ಲಿ ಕನಕದಾಸರು ಮಾಡಿದ್ದಾರೆ ಎನ್ನಬಹುದು.
ಅರ್ಥ ೧. ಮಾಡಿಲ್ಲ....ನೀರನ್ನು ಕಂಡೆ
ಭೌತಾರ್ಥ : ಎಳನೀರು, ಆಧ್ಯಾತ್ಮದ ಅರ್ಥ : ಬೆವರು, ಕಣ್ಣೀರು.
ಕಾಡು.......ಬೂದಿಯ ಕಾಣಲಿಲ್ಲ
ಭೌತಾರ್ಥ : ಕರ್ಪೂರ, ಆಧ್ಯಾತ್ಮದ ಅರ್ಥ : ಜ್ಞಾನಾಗ್ನಿಯಿಂದ ಅರಿಷಡ್ವರ್ಗಗಳ, ಕರ್ಮಗಳ ದಹನ
೨. ಬಿತ್ತಲಿಲ್ಲ.... ಪ್ರಾಣಿಯನು
ಭೌತಾರ್ಥ ; ತಲೆಗೂದಲು, ಆಧ್ಯಾತ್ಮದ ಅರ್ಥ : ಆತ್ಮ
೩. ಅಡಿಕೆ.........ಹಾಲಣ್ಣ
ಭೌತಾರ್ಥ : ಜೇನುಹುಳು, ಜೇಂಗೊಡ, ಜೇನುತುಪ್ಪ, ಆಧ್ಯಾತ್ಮದ ಅರ್ಥ : ಗುರುಬೋಧೆ
ಸೂಕ್ಷ್ಮವಾಗಿದ್ದರೂ, ಅದನ್ನು ಗ್ರಹಿಸುವ ಶಿಷ್ಯನ ಸಾಮರ್ಥ್ಯಕ್ಕನುಗುಣವಾಗಿ ಅದರ ಗಾತ್ರ ಹಿಗ್ಗುತ್ತದೆ.
ಕರೆಯುವವರ ಶಕ್ತಿಯನುಸಾರ ಜೇನನ್ನು ನೀಡುತ್ತದೆ.
ರಂಜಣಿಗಿ = ಮಣ್ಣಿನ ಪಾತ್ರೆ
೪. ಮೂರು ಮೊಳ......ಕುಡುಗೋಲಣ್ಣ
ಭೌತಾರ್ಥ : ಸೋರೆಕಾಯಿ, ಜವಳಿಕಾಯಿ ಮುಂತಾದವು, ಆಧ್ಯಾತ್ಮದ ಅರ್ಥ : ಮೂರು
ಗುಣಗಳಿಂದ ಕೂಡಿದ ಈ ದೇಹವೆಂಬ ಬಳ್ಳಿಗೆ ಷಡ್ವೈರಿಗಳೆಂಬ ಆರು ಮೊಳದ ಕಾಯುಂಟು.
ಅದನ್ನು ಕೊಯ್ಯುವ ಕುಡುಗೋಲು ಹದಿನಾರು ಮೊಳ (ಜ್ಞಾನೇಂದ್ರಿಯಗಳು, ಕರ್ಮೇಂದ್ರಿಯಗಳು
ಹಾಗೂ ಮನಸ್ಸು)
೫. ಊರ ಮುಂದೆ.......ರಕುತವ ಕಾಣಲಿಲ್ಲ
ಭೌತಾರ್ಥ : ಹೇನು, ಇರುವೆ ಮುಂತಾದ ಕ್ರಿಮಿಗಳು, ಆಧ್ಯಾತ್ಮದ ಅರ್ಥ : ಪ್ರತಿಯೊಬ್ಬನ ಸೂಕ್ಷ್ಮ
ದೇಹದಲ್ಲೂ ಅಭಿಮಾನಿ ದೇವತೆಯಾದ ಹಿರಣ್ಯಗರ್ಭನಿಗೆ ಅಹಂಕಾರವೇ ಶಿರಸ್ಸಾಗಿದೆ. ಅದನ್ನು
ವಿಚಾರ ಖಡ್ಗದಿಂದ ಕತ್ತರಿಸಿದುದನ್ನು ಕಂಡೆನಾದರೂ ರಕ್ತ ಕಾಣಲಿಲ್ಲ.
Forums
- Log in to post comments